ಮಾಲ್ಡೀವ್ಸ್: ಮಾಲ್ಡೀವ್ಸ್ನ 60ನೇ ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದು, ಜುಲೈ. 25 ಮತ್ತು 26 ರಂದು ತೆರಳಲಿದ್ದಾರೆ.
ಕಳೆದ ಎರಡು ವರ್ಷಗಳಿಂದ ಭಾರತ ಮತ್ತು ಮಾಲ್ಡೀವ್ಸ್ನ ಸಂಬಂಧ ತೀರಾ ಹದಗೆಟ್ಟಿತ್ತು. 2023ರಲ್ಲಿ ಇಂಡಿಯಾ ಔಟ್ ಅಭಿಯಾನವನ್ನು ಮಾಲ್ಡೀವ್ಸ್ ಸರ್ಕಾರ ಪ್ರಾರಂಭಿಸಿತ್ತು. ಮೊಹಮ್ಮದ್ ಮುಯಿಝು ಮಾಲ್ಡೀವ್ಸ್ ಅಧ್ಯಕ್ಷರಾದ ಬಳಿಕ ಪ್ರಧಾನಿ ಮೋದಿ ಮೊದಲ ಬಾರಿಗೆ ಮಾಲ್ಡೀವ್ಸ್ ಪ್ರವಾಸ ಕೈಗೊಳ್ಳಲಿದ್ದಾರೆ.
ಅಲ್ಲಿನ ಸಚಿವರು ನೇರವಾಗಿಯೇ ಪ್ರಧಾನಿ ಮೋದಿ ವಿರುದ್ಧ ಅಪಪ್ರಚಾರ ಮಾಡಿದ್ದರು. ಅದಕ್ಕೆ ಭಾರತವೂ ಮಾಲ್ಡೀವ್ಸ್ ಹೆಸರೆತ್ತದೆ ಭಾರತದ ಲಕ್ಷ್ಯದ್ವೀಪ ಮಾಲ್ಡೀವ್ಸ್ಗಿಂತಲೂ ಸುಂದರವಾಗಿ ಹೆಚ್ಚಿನ ಜನರು ಅಲ್ಲಿಗೆ ಭೇಟಿ ನೀಡಬೇಕೆಂದು ಮೋದಿ ಹೇಳಿದ್ದರು. ಅದಾದ ನಂತರ ಮಾಲ್ಡೀವ್ಸ್ ಹೋಗುವ ಭಾರತೀಯರ ಸಂಖ್ಯೆಯಲ್ಲಿ ಗಮನಾರ್ಹ ಕಡಿತ ಉಂಟಾಗಿತ್ತು. ಆದರೆ ಕೇವಲ ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಮಾಲ್ಡೀವ್ಸ್ಗೆ ಇದರಿಂದ ಭಾರೀ ಮಟ್ಟದಲ್ಲಿ ಹೊಡೆತ ಬಿದ್ದಿತ್ತು.
ಇದೀಗ ಮತ್ತೆ ಭಾರತದೊಂದಿಗಿನ ಸಂಬಂಧವನ್ನು ಸರಿಯಾಗಿಸಿಕೊಂಡು ಪ್ರವಾಸಿಗರನ್ನು ಆಕರ್ಷಿಸಲು ಮಾಲ್ಡೀವ್ಸ್ ಮುಂದಾಗಿದೆ. ಅಲ್ಲದೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯ ಅತಿಥಿಯನ್ನಾಗಿ ಮಾಡಿರುವುದು ಮಾಲ್ಡೀವ್ಸ್ ಹಾಗೂ ಭಾರತ ನಡುವಿನ ನಿಕಟ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಎಂಬುದರ ಸೂಚನೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

