ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲೆ ಮೈಸೂರಿನ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ಜೊತೆಗೆ 5 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ. ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ಈ ಮಹತ್ವದ ತೀರ್ಪನ್ನು ಇಂದು ಪ್ರಕಟಿಸಿದ್ದಾರೆ.
ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು, “ಈ ಪ್ರಕರಣ ಗಂಭೀರವಾದದ್ದು. ಅಪರಾಧಿಯ ಕ್ರೈಮಿನಲ್ ಮನಸ್ಥಿತಿ ಮತ್ತು ದುಷ್ಕೃತ್ಯಗಳು ಸ್ಪಷ್ಟವಾಗಿವೆ. ಆದ್ದರಿಂದ, ಜೀವಾವಧಿ ಶಿಕ್ಷೆ ಮತ್ತು 5 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತಿದೆ” ಎಂದು ತೀರ್ಪು ನೀಡಿದರು.
ಪ್ರಜ್ವಲ್ ರೇವಣ್ಣ ವಿರುದ್ಧ 2024ರ ಲೋಕಸಭೆ ಚುನಾವಣೆ ಸಂದರ್ಭ ಸರಣಿ ಅತ್ಯಾಚಾರ ಆರೋಪ ಕೇಳಿಬಂದಿತ್ತು. ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದವು. ಇದರಲ್ಲಿ ಮೈಸೂರಿನ ಕೆಆರ್ ನಗರದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪವೂ ಒಂದಾಗಿದೆ. ಅತ್ಯಾಚಾರ ಪ್ರಕರಣ ಬೆಳಕಿಗೆ ಬರಬಾರದು ಎಂದು ಮಹಿಳೆಯನ್ನು ಅಪಹರಿಸಿ ಹುಣಸೂರು ಬಳಿಯ ತೋಟದ ಮನೆಯಲ್ಲಿ ಕೂಡಿಹಾಕಲಾಗಿತ್ತು ಎಂಬ ಆರೋಪದ ಅಡಿ ದೂರು ದಾಖಲಾಗಿತ್ತು.
ಈ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಸೇರಿದಂತೆ ಒಟ್ಟು 9 ಆರೋಪಿಗಳಿದ್ದಾರೆ. ಹೆಚ್ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಒಂದು ವರ್ಷದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್ ರೇವಣ್ಣರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಅವರು ದೋಷಿ ಎಂದು ಸಾಬೀತಾಗಿದ್ದು, ಶಿಕ್ಷೆಯಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರವೆಸಗಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿರುವ ಆರೋಪ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳು ಇನ್ನೂ ವಿಚಾರಣಾ ಹಂತದಲ್ಲಿ ಇವೆ. ಅವುಗಳ ತೀರ್ಪು ಇನ್ನಷ್ಟೇ ಹೊರಬೀಳಬೇಕಿದೆ.
ಮೈಸೂರಿನ ಕೆ.ಆರ್.ನಗರದಲ್ಲಿ ಒಬ್ಬ ಮನೆಕೆಲಸದ ಮಹಿಳೆಯ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪವಿತ್ತು. ಮಹಿಳೆ ಬಡವಳಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದಳು. ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿ, ವಿಚಾರಣೆ ನಡೆಸಿದ ನಂತರ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲಾಗಿತ್ತು.
ಪ್ರಾಸಿಕ್ಯೂಷನ್ ಪರ ವಕೀಲರಾದ ಎಸ್ಪಿಪಿ ಬಿ.ಎನ್. ಜಗದೀಶ್ ಅವರು, “ಇದು ಸಾಮಾನ್ಯ ಅತ್ಯಾಚಾರ ಪ್ರಕರಣವಲ್ಲ. ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಲಾಗಿದೆ. ಅವಳು ಶಿಕ್ಷಿತಳಲ್ಲ, ಬಡವಳು ಮತ್ತು ಅಧಿಕಾರದ ದುರುಪಯೋಗಕ್ಕೆ ಬಲಿಯಾಗಿದ್ದಾಳೆ” ಎಂದು ವಾದಿಸಿದರು.
ಅಲ್ಲದೇ, “ಪ್ರಜ್ವಲ್ ರೇವಣ್ಣ ಅವರು ತಮ್ಮ ರಾಜಕೀಯ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅವರ ಕ್ರೈಮಿನಲ್ ಮನಸ್ಥಿತಿ ಮತ್ತು ಕ್ರೂರತೆ ಸ್ಪಷ್ಟವಾಗಿದೆ. ಇಂತಹ ಪ್ರಕರಣಗಳಲ್ಲಿ ಗರಿಷ್ಠ ಶಿಕ್ಷೆ ವಿಧಿಸುವುದು ಅಗತ್ಯ” ಎಂದು ಒತ್ತಿ ಹೇಳಿದರು.
ಪ್ರಜ್ವಲ್ ರೇವಣ್ಣ ಪರ ವಕೀಲೆ ನಳಿನಾ ಮಾಯಾಗೌಡ ಅವರು, “ಇದು ರಾಜಕೀಯ ಪ್ರೇರಿತ ಪ್ರಕರಣ. ಪ್ರಜ್ವಲ್ ಯುವಕನಾಗಿದ್ದು, ಅವರ ಭವಿಷ್ಯವನ್ನು ನಾಶಪಡಿಸಬಾರದು. ಸಂತ್ರಸ್ತೆಗಿಂತ ಪ್ರಜ್ವಲ್ ಅವರಿಗೆ ಹೆಚ್ಚು ಹಾನಿಯಾಗಿದೆ” ಎಂದು ಪ್ರತಿವಾದ ಮಂಡಿಸಿದರು.

