Sanatana Dharma: ಸನಾತನ ಧರ್ಮವು ಭಾರತವನ್ನು ನಾಶ ಮಾಡಿದೆ. ಸನಾತನ ಧರ್ಮ ಎಂಬುದು ಎಂದಿಗೂ ಇರಲಿಲ್ಲ. ಅದೊಂದು ವಿಕೃತ ಸಿದ್ಧಾಂತ. ನಾವು ಹಿಂದೂ ಧರ್ಮದ ಅನುಯಾಯಿಗಳು ಎಂದು ಎನ್ಸಿಪಿ ಶರದ್ ಪವಾರ್ ಬಣದ ಶಾಸಕ ಜಿತೇಂದ್ರ ಅವ್ಹಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
2008ರ ಮಾಲೆಗಾಂವ್ ಬಾಂಬ್ ಸ್ಫೋಟದ 7 ಆರೋಪಿಗಳನ್ನು ಎನ್ಐಎ ವಿಶೇಷ ಕೋರ್ಟ್ ಖುಲಾಸೆಗೊಳಿಸಿದ ನಂತರ ಕೇಸರಿ ಭಯೋತ್ಪಾದನೆ ಎಂಬ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಶಾಸಕ ಜಿತೇಂದ್ರ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರಿಗೆ ಪಟ್ಟಾಭಿಷೇಕವನ್ನು ನಿರಾಕರಿಸಿ ಅವಮಾನ ಮಾಡಲು ಸನಾತನ ಧರ್ಮವೇ ಕಾರಣ. ಸಮಾಜ ಸುಧಾರಕ ಜ್ಯೋತಿರಾವ್ ಪುಲೆಯವರನ್ನು ಹತ್ಯೆ ಮಾಡಲು ಪ್ರಯತ್ನಿಸಿದ್ದು ಸನಾತನ ಧರ್ಮದ ಅನುಯಾಯಿಗಳು ಎಂದು ಆರೋಪಿಸಿದ್ದಾರೆ.
ಜ್ಯೋತಿರಾವ್ ಪುಲೆ ಪತ್ನಿ ಸಾವಿತ್ರಿ ಬಾಯಿ ಪುಲೆ ಮೇಲೆ ಸೆಗಣಿನ ಎರಚಿದ್ದು, ಶಾಹು ಮಹಾರಾಜರನ್ನು ಕೊಲ್ಲಲು ಸಂಚು ರೂಪಿಸಿದ್ದು, ಡಾ.ಬಿ.ಆರ್.ಅಂಬೇಡ್ಕರ್ಗೆ ನೀರು ಕುಡಿಯಲು, ಶಾಲೆಗೆ ಹೋಗಲು ಅವಕಾಶ ನೀಡದೇ ಇದ್ದದ್ದು ಇದೇ ಸನಾತನ ಧರ್ಮ. ಡಾ.ಅಂಬೇಡ್ಕರ್ ಸನಾತನ ಧರ್ಮವನ್ನು ವಿರೋಧಿಸಿದರು. ಮನುಸ್ಮೃತಿಯನ್ನು ಸುಟ್ಟು ಹಾಕಿ, ಅದರ ಸಂಪ್ರದಾಯಗಳನ್ನು ತಿರಸ್ಕರಿಸಿದರು. ಸನಾತನ ಧರ್ಮ ಮತ್ತು ಅದರ ಸಿದ್ಧಾಂತವನ್ನು ವಿಕೃತ ಎಂದು ಕರೆಯಲು ಸಹ ಜನ ಹಿಂಜರಿಯಬಾರದು ಎಂದು ಹೇಳಿದ್ದಾರೆ.
ಶಾಸಕ ಜಿತೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಸಂಬಿತ್ ಪಾತ್ರ, “ನಾವು ಸಹಿಷ್ಣುಗಳು, ಅದಕ್ಕಾಗಿ ಸುದ್ದಿಗೋಷ್ಠಿ ಮೂಲಕ ಅವರ ಹೇಳಿಕೆಯನ್ನು ಟೀಕಿಸುತ್ತಿದ್ದೇವೆ. ಒಂದು ವೇಳೆ ಅವರು ಇಸ್ಲಾಂ ಧರ್ಮದ ಬಗ್ಗೆ ಮಾತನಾಡಿದ್ದರೆ, ಶಾಂತಿಯುತವಾದ ಉತ್ತರ ಸಿಗುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

