ಬೆಂಗಳೂರು : ರಾಜಣ್ಣ ಅವರಿಂದ ಯಾಕೆ ರಾಜೀನಾಮೆ ಪಡೆಯಲಾಗಿದೆಯೋ ಗೊತ್ತಿಲ್ಲ, ಇದು ಪಕ್ಷದ ನಿರ್ಧಾರ, ಬೇರೆ ಯಾವುದೇ ವಿಚಾರ ನನಗೆ ಗೊತ್ತಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನಗೊಂದು ಮಾಹಿತಿ ನೀಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಶಾಸಕರು ಮತ್ತು ಮಂತ್ರಿಗಳು ನನ್ನ ವ್ಯಾಪ್ತಿಗೆ ಬರಲ್ಲ, ಶಾಸಕಾಂಗ ಪಕ್ಷದ ನಾಯಕರು ಮುಖ್ಯಮಂತ್ರಿಯವರಾಗಿರುತ್ತಾರೆ, ಹಾಗಾಗಿ ಈ ವಿಚಾರ ಅವರಿಗೆ ಸಂಬಂಧಿಸಿದ್ದು ನನಗಲ್ಲ ಎಂದ ಶಿವಕುಮಾರ್, ರಾಜಣ್ಣ ಮತ್ತು ನಾನು ಕಳೆದ 25 ವರ್ಷಗಳಿಂದ ಸ್ನೇಹಿತರು, ನಮ್ಮ ನಡುವೆ ಉತ್ತಮ ಬಾಂಧವ್ಯವಿದೆ, ಅವರ ರಾಜೀನಾಮೆಯಿಂದ ನನ್ನ ಮನಸ್ಸಿಗೂ ನೋವಾಗಿದೆ, ಆದರೇನು ಮಾಡೋದು? ಇದು ಪಕ್ಷದ ತೀರ್ಮಾನ ಎಂದು ಶಿವಕುಮಾರ್ ಹೇಳಿದರು.
ಹೈಕಮಾಂಡ್ ಸೂಚನೆ ಮೇರೆಗೆ ಕೆ.ಎನ್.ರಾಜಣ್ಣ ಅವರನ್ನು ವಜಾ ಮಾಡಲಾಯಿತೇ ಎಂದು ಕೇಳಿದಾಗ,”ಇದರಿಂದ ನನಗೂ ನೋವಾಗಿದೆ. ರಾಜಣ್ಣ ಅವರು ನನ್ನ ಒಳ್ಳೆಯ ಸ್ನೇಹಿತರು, ಆಪ್ತರು. ಕಳೆದ 25 ವರ್ಷಗಳಿಂದ ಜೊತೆಯಲ್ಲಿ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ” ಎಂದು ಹೇಳಿದರು.
ಪಕ್ಷದಿಂದ ಉಚ್ಚಾಟಿಸಬೇಕು ಎಂದು ಹೈಕಮಾಂಡ್ ನಿಂದ ಸೂಚನೆ ಏನಾದರೂ ಬಂದಿತ್ತೇ ಎಂದು ಕೇಳಿದಾಗ, “ಶಾಸಕರು ಮತ್ತು ಮಂತ್ರಿಗಳು ನನ್ನ ಕಾರ್ಯವ್ಯಾಪ್ತಿಗೆ ಬರುವುದಿಲ್ಲ. ಶಾಸಕರಾದ ನಂತರ ಪಕ್ಷಕ್ಕೆ ಸಂಬಂಧ ಪಟ್ಟಂತೆ ಅಶಿಸ್ತು ತೋರಿದರೆ ಸಣ್ಣಪುಟ್ಟ ನೋಟಿಸ್ ನೀಡುವ ಕೆಲಸ ಮಾಡಲಾಗುತ್ತದೆ. ಇದರ ಹೊರತಾಗಿ ಸಿಎಲ್ ಪಿ ನಾಯಕರೇ ಮಂತ್ರಿಗಳು ಹಾಗೂ ಶಾಸಕರ ಮೇಲೆ ನಿಯಂತ್ರಣ ಹೊಂದಿರುತ್ತಾರೆ” ಎಂದರು.
ಯಾವ ಕಾರಣಕ್ಕೆ ರಾಜಣ್ಣ ಅವರನ್ನು ವಜಾ ಮಾಡಲಾಯಿತು ಎಂದಾಗ, “ಇದರ ಬಗ್ಗೆ ನನಗೆ ಗೊತ್ತಿಲ್ಲ. ಏನೂ ಮಾಡಲು ಆಗುವುದಿಲ್ಲ. ಇದು ಪಕ್ಷದ ತೀರ್ಮಾನ” ಎಂದರು.
ರಾಜೀನಾಮೆ ತೆಗೆದುಕೊಳ್ಳಬಹುದಿತ್ತು, ಆದರೆ ವಜಾ ಮಾಡಿದ್ದು ಅವಮಾನ ಮಾಡಿದಂತೆ ಅಲ್ಲವೇ ಎಂದಾಗ, “ಇದರ ಬಗ್ಗೆ ನನಗೆ ಏನೂ ಗೊತ್ತಿಲ್ಲ” ಎಂದು ಪುನರುಚ್ಚರಿಸಿದರು.

