ರಾಜಸ್ಥಾನ : ರಾಜಸ್ಥಾನದಲ್ಲಿ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ದೇಹವನ್ನು ನೀರಿನ ಡ್ರಮ್ ನಲ್ಲಿ ನಲ್ಲಿ ಮುಚ್ಚಿಟ್ಟಿರೋ ಶಾಕಿಂಗ್ ಘಟನೆ ನಡೆದಿದೆ. ಕಳೆದ 2 ತಿಂಗಳಿಂದ ಸೂರಜ್ ಕುಟುಂಬ ಬಾಡಿಗೆಗೆ ವಾಸಿಸುತ್ತಿದ್ದ ಮನೆ ಖೈರ್ತಾಲ್ ತಿಜಾರಾ ಜಿಲ್ಲೆಯ ಕಿಶನ್ಗಢಬಾಸ್ ಪ್ರದೇಶದಲ್ಲಿ ಘಟನೆ ನಡೆದಿದೆ.
ನೀಲಿ ಬಣ್ಣದ ಡ್ರಮ್ನಲ್ಲಿ ಯುವಕನನ್ನು ಕೊಂದು ದೇಹವನ್ನು ಬಚ್ಚಿಟ್ಟಿದ್ದಾರೆ. ಅಲ್ಲದೆ ನೀಲಿ ಡ್ರಮ್ ತುಂಬಾ ಉಪ್ಪನ್ನು ತುಂಬಿಡಲಾಗಿದ್ದು, ಘಟನೆ ನಂತರ ಕೊಲೆಯಾದ ಸೂರಜ್ ಪತ್ನಿ ಮಕ್ಕಳ ಜತೆ ಎಸ್ಕೇಪ್ ಆಗಿದ್ದಾರೆ .
ಆದರ್ಶ ಕಾಲೋನಿಯಲ್ಲಿರುವ ರಾಜೇಶ್ ಶರ್ಮಾ ಅವರ ಮನೆಯಲ್ಲಿ ಸೂರಜ್ ಬಾಡಿಗೆಗೆ ವಾಸಿಸುತ್ತಿದ್ದರು. ಇದೀಗ ಕೊಲೆ ಬಳಿಕ ಅವರ ಪತ್ನಿ ತಮ್ಮ ಹಿರಿಯ ಮಗ ಹರ್ಷಲ್, ಮಗಳು ನಂದಿನಿ ಮತ್ತು ಕಿರಿಯ ಮಗ ಗೋಲು ಅವರೊಂದಿಗೆ ಮನೆ ಮಾಲೀಕರ ಪುತ್ರ ಜಿತೇಂದ್ರ ಜತೆ ಎಸ್ಕೇಪ್ ಆಗಿದ್ದಾರೆ. ಘಟನೆಯ ನಂತರ ನಲ್ವಾರು ನಾಪತ್ತೆಯಾಗಿದ್ದಾರೆ. ಪೊಲೀಸರು ಎಲ್ಲರ ತಲಾಶ್ ಗೆ ವಿಶೇಷ ತಂಡ ರಚಿಸಿ ಬಲೆ ಬೀಸಿದ್ದಾರೆ.
ಮನೆಯ ಛಾವಣಿಯ ಮೇಲೆ ಇರಿಸಲಾಗಿದ್ದ ನೀಲಿ ಡ್ರಮ್ಮಿಂದ ವಿಪರೀತ ವಾಸನೆ ಬಂದಾಗ ಸ್ಥಳೀಯ ಜನರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ತಲುಪಿ ಡ್ರಮ್ ಅನ್ನು ಪರಿಶೀಲಿಸಿದಾಗ, ಅದರಲ್ಲಿ ಯುವಕನ ಶವ ಕಂಡುಬಂದಿದೆ. ಮೃತ ಯುವಕ ಉತ್ತರ ಪ್ರದೇಶದ ನಿವಾಸಿಯಾಗಿದ್ದಾನೆ. ಸುಮಾರು ಒಂದೂವರೆ ತಿಂಗಳಿನಿಂದ ಕಿಶನ್ಗಢಬಾಸ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮೃತರು ಸ್ಥಳೀಯ ಇಟ್ಟಿಗೆ ಗೂಡುಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಮೃತ ಯುವಕನನ್ನು ಹಂಸರಾಜ್ ಅಲಿಯಾಸ್ ಸೂರಜ್ ಎಂದು ಗುರುತಿಸಲಾಗಿದೆ ಎಂದು ಕಿಶನ್ಗಢಬಾಸ್ ಡಿಎಸ್ಪಿ ರಾಜೇಂದ್ರ ಸಿಂಗ್ ನಿರ್ವಾಣ ಮಾಹಿತಿ ನೀಡಿದ್ದು, ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ಇನ್ನಷ್ಟೇ ದೃಢವಾಗಬೇಕಿದೆ. ಸ್ಥಳೀಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

