ನವದೆಹಲಿ : ಬ್ಯಾಂಕುಗಳಿಂದ ಸಾಲ ಪಡೆಯಲು ಈಗ ಸಿಬಿಲ್ ಸ್ಕೋರ್ ಕಡ್ಡಾಯ ನಿಯಮವಾಗಿದೆ. ಹೀಗಾಗಿ, ಜನರು ಕೂಡ ತಮ್ಮ ಸಿಬಿಲ್ ಅಂಕಿಯನ್ನು 700ರ ಆಸುಪಾಸಿನಲ್ಲಿ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಅಕಸ್ಮಾತ್, ಈ ಸಂಖ್ಯೆ ಕಡಿಮೆಯಾದರೆ ಬ್ಯಾಂಕಿನಲ್ಲಿ ಸಾಲಗಳು ಸಿಗುವುದು ಕಷ್ಟವಾಗಲಿದೆ. ಇನ್ನು ಕೆಲವೊಮ್ಮೆ ಸಿಗುವುದೇ ಇಲ್ಲ. ನೇರವಾಗಿ ಸಾಲದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಆದಾಗ್ಯೂ, ಅನೇಕರು ಸಿಬಿಲ್ ಸ್ಕೋರ್ ಹೊಂದದ ಕಾರಣ, ಬ್ಯಾಂಕುಗಳು ಸಾಲ ನೀಡಲು ಹಿಂಜರಿಯುತ್ತಿವೆ. ಈ ಸಮಯದಲ್ಲಿ, ಕೇಂದ್ರ ಸರ್ಕಾರವು ಅಂತವರಿಗೆ ಸಿಹಿ ಸುದ್ದಿಯನ್ನೇ ಕೊಟ್ಟಿದೆ.
ಕ್ರೆಡಿಟ್ ಸ್ಕೋರ್ ಇಲ್ಲದೆ ನಾನು ಸಾಲ ಪಡೆಯಬಹುದೇ? ಎಂಬ ಅನುಮಾನ ಗೊಂದಲ ಅನೇಕರದ್ದು. ಇಂತಹ ಗೊಂದಲಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರವು ಸಾಲಗಳು ಮತ್ತು ಸಿಬಿಲ್ ಸ್ಕೋರ್‌ನಂತಹ ವಿಷಯಗಳ ಕುರಿತು ಪ್ರಮುಖ ವಿಚಾರವನ್ನು ಚರ್ಚಿಸಿದೆ. ಈ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ, “ಮೊದಲ ಬಾರಿಗೆ ಸಾಲ ಪಡೆಯುವವರು ಕನಿಷ್ಠ ಸಿಬಿಲ್ ಸ್ಕೋರ್ ಹೊಂದಿರಲೇಬೇಕು ಎಂದೇನಿಲ್ಲ. ಇದರ ಅಗತ್ಯವಿಲ್ಲ” ಎಂದಿದ್ದಾರೆ. “ಆರ್ಬಿಐ ಮಾರ್ಗಸೂಚಿಗಳನ್ನು ಉಲ್ಲೇಖಿಸಿ, ಕ್ರೆಡಿಟ್ ಸ್ಕೋರ್ ಇಲ್ಲದಿದ್ದರೂ ಸಹ ಬ್ಯಾಂಕುಗಳು ಸಾಲವನ್ನು ನೀಡಲಿದೆ. ಅರ್ಜಿಗಳನ್ನು ತಿರಸ್ಕರಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಮಾತು ಮುಂದುವರಿಸಿದ ಅವರು, “ಮೊದಲ ಬಾರಿಗೆ ಸಾಲ ಪಡೆಯುವವರಿಗೆ ಸಿಬಿಲ್ ಅಂಕಿ ಉಪಯುಕ್ತವಲ್ಲ. ಸ್ಕೋರ್ ಕಡ್ಡಾಯವಲ್ಲದಿದ್ದರೂ ಬ್ಯಾಂಕುಗಳು ಅರ್ಜಿದಾರರ ಹಿನ್ನೆಲೆ, ವಹಿವಾಟುಗಳನ್ನು ಪರಿಶೀಲಿಸಬೇಕು. ಇದು ಕ್ರೆಡಿಟ್ ಇತಿಹಾಸ, ಸಾಲ ಮರುಪಾವತಿ ವಿವರಗಳು, ಪುನರ್ರಚನೆ ಮತ್ತು ಬರವಣಿಗೆಗಳಂತಹ ಅಂಶಗಳನ್ನು ಒಳಗೊಂಡಿರಬೇಕು” ಎಂದು ಒತ್ತಿ ಹೇಳಿದರು.

