ಬೆಂಗಳೂರು: ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವಂತಹ ಬಿಜೆಪಿ- ಜೆಡಿಎಸ್ ಪಕ್ಷಗಳ ರಾಜಕೀಯ ಒಳಒಪ್ಪಂದವನ್ನು ಕಾಂಗ್ರೆಸ್ ಸರ್ಕಾರ ನಿಷ್ಪಕ್ಷಪಾತ ಎಸ್ಐಟಿ ತನಿಖೆ ಮೂಲಕ ವಿಫಲಗೊಳಿಸಿದೆ. ಇದೆಲ್ಲವೂ ಪ್ರತಿಪಕ್ಷಗಳ ರಾಜಕೀಯ ನಾಟಕ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಮ್ಮ ರಕ್ತದಾಹ ನಿಲ್ಲಿಸಿ, ಕ್ಷೇತ್ರದ ಪಾವಿತ್ರ್ಯತೆ ಉಳಿಸಿ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಕಿಡಿಕಾರಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳ ಜತೆ ಅವರು ಮಾತನಾಡಿದರು. ಧರ್ಮಸ್ಥಳಕ್ಕೆ ಬಿಜೆಪಿಯವರು ಭೇಟಿ ಜತೆಗೆ ಸೌಜನ್ಯ ಅವರ ಮನೆಗೂ ಭೇಟಿ ನೀಡಿದ ಬಗ್ಗೆ ಕೇಳಿದಾಗ, ʼಯಾತ್ರೆಯಲ್ಲಿ ಅಲ್ಲಿನ ಜನಪ್ರತಿನಿಧಿಗಳೂ ಸಹ ಶ್ರೀಕ್ಷೇತ್ರವನ್ನು ಒಪ್ಪಿ ಮಾತನಾಡಿಲ್ಲ.
ಕೇವಲ ಸ್ವಾಮಿ ಮಂಜುನಾಥನ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಆಗ ಸುಖಾಸುಮ್ಮನೆ ಆರೋಪಗಳನ್ನು ಮಾಡಿ, ಈಗ ಕೊಳಕು ರಾಜಕಾರಣದಿಂದ ಆಚೆ ಬರಲು ಧರ್ಮಸ್ಥಳದ ಯಾತ್ರೆ ಮಾಡಲಾಗಿದೆ. ಇದು ಕ್ಷೇತ್ರದ ಮೇಲೆ ಇರುವ ಗೌರವದಿಂದ ಮಾಡಿರುವ ಯಾತ್ರೆಯಲ್ಲʼ ಎಂದು ಆರೋಪಿಸಿದರು.
ಬಿಜೆಪಿ- ಜೆಡಿಎಸ್ ಅವರು ಏತಕ್ಕೆ ಯಾತ್ರೆ ಮಾಡಿದ್ದಾರೆ. ಯಾರಿಗೆ ಸಾಂತ್ವನ ಹೇಳಲು ಯಾತ್ರೆಗೆ ಹೋಗಿದ್ದಾರೆ ಎಂದು ಪ್ರಶ್ನಿಸಿದ ಡಿ.ಕೆ. ಸುರೇಶ್ ಅವರು, ಬಿಜೆಪಿಯವರ ರಾಜಕೀಯ ಬೇಳೆ ಅಲ್ಲಿ ಬೇಯುವುದಿಲ್ಲ. ಏಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯ ಜನ ಬಿಜೆಪಿಗರ ರಾಜಕೀಯ ಒಳ ಒಪ್ಪಂದಗಳನ್ನು ಅರಿತಿದ್ದಾರೆ ಎಂದು ದೂರಿದರು. ಈ ಹಿಂದೆಯೂ ಸೌಜನ್ಯ ಅವರ ಮನೆಗೆ ತೆರಳಿ ಸಾಂತ್ವನವೆಂಬ ನಾಟಕವಾಡಿ ಯಾವ ರೀತಿಯ ಹೇಳಿಕೆಗಳನ್ನು ಕೊಟ್ಟಿದ್ದಾರೆ ಎನ್ನುವುದು ದಾಖಲೆಗಳಲ್ಲಿದೆ. ಈಗಲೂ ಸಹ ಇದೇ ರೀತಿಯ ವ್ಯವಸ್ಥೆ ರೂಪಿಸಿ ಜನರನ್ನು ಮರುಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

