ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಸಂಘಟನೆಯ ಪ್ರಮುಖ ಉಗ್ರ ಸೇರಿದಂತೆ ಇಬ್ಬರು ಭಯೋತ್ಪಾದಕರು ಹತ್ಯೆಗೀಡಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಮೂವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಿರ್ದಿಷ್ಟ ಗುಪ್ತಚರ ಮಾಹಿತಿಯನ್ನು ಸೇನೆಗೆ ನೀಡಿದ್ದರು. ಈ ಮಾಹಿತಿ ಆಧರಿಸಿ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಭದ್ರತಾ ಸಿಬ್ಬಂದಿ ಸಹ ಗುಂಡು ಹಾರಿಸಿದ್ದಾರೆ. ಸೇನೆ ನಡೆಸಿದ ದಾಳಿಯಿಂದ ಇಬ್ಬರು ಉಗ್ರರು ಸಾವಿಗೀಡಾಗಿದ್ದಾರೆ.
ಹತ್ಯೆಯಾದ ಎಲ್‌ಇಟಿಯ ಪ್ರಮುಖ ಉಗ್ರನನ್ನು ರೆಹಮಾನ್ ಭಾಯ್ ಎಂದು ಗುರುತಿಸಲಾಗಿದೆ. ಆತನ ಮೃತದೇಹವನ್ನು ಗುಡ್ಡಾರ್ ಅರಣ್ಯ ಪ್ರದೇಶದಲ್ಲಿ ಸೇನೆ ಪತ್ತೆ ಹಚ್ಚಿದೆ. ಕಾರ್ಯಾಚರಣೆಯಲ್ಲಿ ಜೂನಿಯರ್ ಕಮಿಷನ್ಡ್ ಅಧಿಕಾರಿ ಸೇರಿದಂತೆ ಮೂವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ.

