ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ಮತದಾನ ಪ್ರಾರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಮತ ಚಲಾಯಿಸಿದರು. ಬೆಳಗ್ಗೆ 10 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಪಕ್ಷದ ಇತರ ನಾಯಕರೊಂದಿಗೆ ಮತ ಚಲಾಯಿಸಿದರು.
ಸಂಜೆ 6 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಸಂಸತ್ ಭವನದಲ್ಲಿ ನಡೆಯುವ ಚುನಾವಣೆಯಲ್ಲಿ ಹಾಲಿ ಉಪರಾಷ್ಟ್ರಪತಿಗಳ ಉತ್ತರಾಧಿಕಾರಿಯನ್ನು ನಿರ್ಧರಿಸಲಾಗುವುದು.
ಮತ ಚಲಾಯಿಸಲು ವ್ಹೀಲ್ಚೇರ್ನಲ್ಲಿ ಬಂದ ದೇವೇಗೌಡರು
ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸಂಸದ ಹೆಚ್ಡಿ ದೇವೇಗೌಡರು, ವ್ಹೀಲ್ಚೇರ್ನಲ್ಲಿ ಬಂದು ಮತ ಚಲಾಯಿಸಿದ್ದಾರೆ. ವಯಸ್ಸಿಗೆ ಸಂಬಂಧಿತ ಆರೋಗ್ಯವಿದ್ದರೂ ಕೂಡ ಹುಮ್ಮಸ್ಸಿನಿಂದ ಬಂದು ಮತ ಚಲಾಯಿಸಿದ್ದಾರೆ.
ಭಾರತದ 17ನೇ ಉಪರಾಷ್ಟ್ರಪತಿ ಚುನಾವಣೆಗೆ ಇಂದು ಸಂಸತ್ ಭವನದಲ್ಲಿ ಮತದಾನ ನಡೆಯಲಿದೆ. ಎನ್ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಮತ್ತು ಇಂಡಿ ಒಕ್ಕೂಟದ ಅಭ್ಯರ್ಥಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ನಡುವೆ ಸ್ಪರ್ಧೆ ಇದೆ. ಜಗದೀಪ್ ಧನ್ಖರ್ ಜುಲೈ 21ರಂದು ಅನಾರೋಗ್ಯ ಕಾರಣಗಳನ್ನು ನೀಡಿ ಹಠಾತ್ತನೆ ರಾಜೀನಾಮೆ ನೀಡಿದ ಕಾರಣ ಈಗ ಚುನಾವಣೆ ನಡೆಯುತ್ತಿದೆ.
ಕೈಕೈ ಹಿಡಿದು ಬಂದ ಖರ್ಗೆ, ಗಡ್ಕರಿ
ಮತ ಚಲಾಯಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೈ ಕೈ ಹಿಡಿದು ಒಳಗೆ ಬರುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅಚ್ಚರಿಯನ್ನೂ ಮೂಡಿಸಿದೆ. ಮತ ಚಲಾಯಿಸಲು ಬಂದಾಗ ಯಾವ ಕಡೆ ಹೋಗಬೇಕೆಂದು ಗೊಂದಲದಲ್ಲಿದ್ದ ಖರ್ಗೆಗೆ ಗಡ್ಕರಿ ಗೈಡ್ ಮಾಡುತ್ತಿರುವುದನ್ನು ಕಾಣಬಹುದು.


