ಧಾರ್ : ತಾಯಿಯ ಎದುರೇ ಐದು ವರ್ಷದ ಬಾಲಕನ ಶಿರಚ್ಛೇದ ಮಾಡಿರುವ ಘಟನೆ ಮಧ್ಯಪ್ರದೇಶದ ಧಾರ್ನಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಮನೆಗೆ ನುಗ್ಗಿ ಬಾಲಕನ ತಲೆ ಕಡಿದು ಹತ್ಯೆ ಮಾಡಿದ್ದಾನೆ.
ಶುಕ್ರವಾರ ಈ ಘಟನೆ ನಡೆದಿದ್ದು, ಐದು ವರ್ಷದ ವಿಕಾಸ್ ತನ್ನ ತಾಯಿಯೊಂದಿಗೆ ಮನೆಯಲ್ಲಿದ್ದ. ಮಹೇಶ್ ಎಂಬ ಆರೋಪಿ ದ್ವಿಚಕ್ರ ವಾಹನದಲ್ಲಿ ಬಂದು ವಿಕಾಸ್ನ ಮನೆಗೆ ನುಗ್ಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮನೆಯಲ್ಲಿ ಬಿದ್ದಿದ್ದ ಹರಿತವಾದ ಕೊಡಲಿಯಿಂದ ವಿಕಾಸ್ ಮೇಲೆ ಹಲ್ಲೆ ನಡೆಸಿ, ಬಾಲಕನ ತಲೆಯನ್ನು ಕತ್ತರಿಸಿ ಹಾಕಿದ್ದಾನೆ. ನಂತರ ದಾಳಿಕೋರ ಬಾಲಕನ ಭುಜಕ್ಕೆ ಹೊಡೆದಿದ್ದರಿಂದ ಬಾಲಕನ ದೇಹವು ಛಿದ್ರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆರೋಪಿಯನ್ನು ಕುಟುಂಬವು ಹಿಂದೆಂದೂ ನೋಡಿರಲಿಲ್ಲ, ಮತ್ತು ಆತ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ. ಈ ಘಟನೆ ನೋಡಿ ಬಾಲಕನ ತಾಯಿ ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಸ್ಥಳೀಯರು ಆತನನ್ನು ಹಿಡಿದಿದ್ದಾರೆ ಮತ್ತು ಪೊಲೀಸರು ಬರುವ ಮೊದಲೇ ಆತನ ಮೇಲೆ ಹಲ್ಲೆ ನಡೆಸಲಾಯಿತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆತ ಸಾವನ್ನಪ್ಪಿದ್ದಾನೆ.

