ಬೆಂಗಳೂರು: ರಾಜ್ಯದ ಎಲ್ಲ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಶುಭ ಸುದ್ದಿ ನೀಡಿದೆ. ರಾಜ್ಯ ಸರ್ಕಾರದ ಎಲ್ಲಾ ನೇಮಕಾತಿಗಳಲ್ಲಿ ಎಲ್ಲ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಒಂದು ಬಾರಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ನಡೆಸುವ ನೇರ ನೇಮಕಾತಿಯಲ್ಲಿ ಭಾಗವಹಿಸುವ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೂ ಒಂದು ಬಾರಿಗೆ ಅನ್ವಯವಾಗುವಂತೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ.
ಇತ್ತೀಚೆಗೆ ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು 5 ವರ್ಷ ವಯೋಮಿತಿ ಸಡಿಲಿಕೆ ಹಾಗೂ ಪಿಎಸ್‌ಐ/ಕಾನ್ಸಟೇಬಲ್ ಹುದ್ದೆಗಳಿಗೆ ನೇಮಕಾತಿ ಆದೇಶಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಇದರ ಮಧ್ಯೆ ಇದೇ ತಿಂಗಳ 6ರಂದು ರಾಜ್ಯ ಸರ್ಕಾರ ಸಿವಿಲ್ ಹುದ್ದೆಗಳ ನೇರ ನೇಮಕಾತಿಗಳಿಗೆ 2 ವರ್ಷ ಸಡಿಲಿಕೆ ಮಾಡಿ ಆದೇಶಿಸಿತ್ತು. ಇದೀಗ 3 ವರ್ಷಗಳ ಸಡಿಲಿಕೆ ಮಾಡಿದೆ.
2019ರಿಂದಲೂ ಕೋವಿಡ್ ಹಾಗೂ ಮತ್ತಿತರೆ ಕಾರಣಗಳಿಂದ ನೇರನೇಮಕಾತಿಗಳಿಗೆ ಸರ್ಕಾರ ಅಧಿಸೂಚನೆ ಹೊರಡಿಸಲಿಲ್ಲ. ಪಿಎಸ್‌ಐ ಹಾಗೂ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಪರೀಕ್ಷೆ ನಡೆಸಿತ್ತಿದ್ದಾರೂ ನೇಮಕಾತಿ ಆದೇಶ ಇನ್ನೂ ನೀಡಿಲ್ಲ. ಇದರಿಂದ ಸರ್ಕಾರಿ ಕೆಲಸವನ್ನೇ ನೆಚ್ಚಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಂಡಿರುವ ಲಕ್ಷಾಂತರ ಯುವಕರು ವಯೋಮಿತಿ ಮೀರುತ್ತಿರುವ ಹಿನನೆಲೆಯಲ್ಲಿ ಆತಂಕಗೊಂಡಿದ್ದರು.
ವಯೋಮಿತಿ ಸಡಿಲಿಕೆ ಎಷ್ಟು?
*ಸಾಮಾನ್ಯ ವರ್ಗ – 35 ವರ್ಷದಿಂದ 38 ವರ್ಷ
*ಒಬಿಸಿ – 38 ವರ್ಷದಿಂದ 41 ವರ್ಷ
*ಎಸ್‌ಸಿ/ಎಸ್‌ಟಿ/ಪ್ರವರ್ಗ-1 – 40 ವರ್ಷದಿಂದ 43 ವರ್ಷ

