ನವದೆಹಲಿ : ದೇಶದಾದ್ಯಂತ ವಿಜಯದಶಮಿ ಹಬ್ಬದ ಸಡಗರ ಮನೆ ಮಾಡಿದ್ದು, ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ದೇಶದ ಜನತೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ವಿಜಯದಶಮಿ ಕೆಟ್ಟದ್ದು, ಮತ್ತು ಅಸತ್ಯದ ಮೇಲೆ ಒಳ್ಳೆಯ ಮತ್ತು ಸತ್ಯದ ವಿಜಯದ ಸಂಕೇತವಾಗಿದೆ. ಈ ಪವಿತ್ರ ಸಂದರ್ಭದಲ್ಲಿ ಪ್ರತಿಯೊಬ್ಬರೂ ಧೈರ್ಯ, ಬುದ್ದಿವಂತಿಕೆ, ಮತ್ತು ಭಕ್ತಿಯ ಹಾದಿಯಲ್ಲಿ ನಿರಂತರವಾಗಿ ಮುನ್ನಡೆಯಲು ಸ್ಪೂರ್ತಿ ಪಡೆಯಲಿ ಎಂಬುವುದು ನನ್ನ ಆಶಯ ಎಂದು ಶುಭಕೋರಿದ್ದಾರೆ.
ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಶುಭಕೋರಿದ್ದು, ಅಸತ್ಯದ ವಿರುದ್ಧ ಸತ್ಯ, ಅಧರ್ಮದ ವಿರುದ್ಧ ಧರ್ಮ ಮತ್ತು ಅಜ್ಞಾನದ ವಿರುದ್ಧ ಜ್ಞಾನವು ವಿಜಯ ಸಾಧಿಸಿದ ಪವಿತ್ರ ದಿನವೇ ವಿಜಯದಶಮಿ. ಈ ಶುಭ ಸಂದರ್ಭದಲ್ಲಿ, ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಯು ಸರ್ವರಿಗೂ ಆಯಸ್ಸು, ಆರೋಗ್ಯ, ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ. ನಾಡಿನ ಸಮಸ್ತ ಜನತೆಗೆ ದಸರಾ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಪೋಸ್ಟ್ ಮಾಡಿದ್ದಾರೆ.
ವಿಶೇಷ ಎಂದರೆ ವಿಜಯದಶಮಿಗೆ ಕನ್ನಡಿಗರ ಹೆಮ್ಮೆ ಆರ್ ಸಿಬಿ ಕೂಡ ಶುಭಹಾರಿಸಿದ್ದು, ಸಂತೋಷ ಮತ್ತು ವಿಜಯದ ಬೆಳಕಿನಿಂದ ನಿಮ್ಮ ಜೀವನ ತುಂಬಿರಲಿ, ಎಲ್ಲರಿಗೂ ದಸರಾ ಹಾಗೂ ವಿಜಯದಶಮಿಯ ಶುಭಾಶಯಗಳು! ಎಂದು ಬರೆದುಕೊಂಡಿದೆ.

