ಬೆಂಗಳೂರು: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಣೆ ಹಿನ್ನೆಲೆ ಡಿಸಿ ಕ್ರಮ ಪ್ರಶ್ನಿಸಿ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಹೈಕೋರ್ಟ್ ನವೆಂಬರ್ 2ರಂದು ಪಥಸಂಚಲನಕ್ಕೆ ಅನುಮತಿ ನೀಡಿದೆ.
ಇಂದು ಅರ್ಜಿ ಸಂಬಂಧ ವಿಚಾರನೆ ನಡೆಸಿದ ಕೋರ್ಟ್ ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಆ ಮೂಲಕ ಮಹತ್ವದ ಆದೇಶ ಹೊರಡಿಸಿದೆ. ಪಥಸಂಚಲನ ಮಾರ್ಗದೊಂದಿಗೆ ಹೊಸದಾಗಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿ, ಅಕ್ಟೋಬರ್ 24ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿದೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇದು ಜನತಂತ್ರದ ವಿಜಯ ಎಂದು ಶ್ಲಾಘಿಸಿದ್ದಾರೆ. ಎಕ್ಸ್ ಪೋಸ್ಟ್‌ನಲ್ಲಿ ಬರೆದಿರುವ ಅವರು, ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನಕ್ಕೆ ಅನುಮತಿ ನೀಡಿದ ಘನ ಉಚ್ಛ ನ್ಯಾಯಾಲಯದ ತೀರ್ಪು ಜನತಂತ್ರದ ವಿಜಯವಾಗಿದೆ. ಪ್ರಜಾತಂತ್ರದ ಹಕ್ಕು ಕಸಿಯಲು ಹೊರಟ ಕಾಂಗ್ರೆಸ್ ಸರ್ಕಾರಕ್ಕೆ ಉಚ್ಛ ನ್ಯಾಯಾಲಯ ಚಾಟಿ ಬೀಸಿ ಸಂವಿಧಾನದ ಘನತೆಯನ್ನು ಎತ್ತಿ ಹಿಡಿದಿದೆ.
ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಿರ್ಬಂಧಿಸಲು ಹೊರಟವರಿಗೆ ಮುಖಭಂಗವಾಗಿದೆ. ಇಂದಿನ ನ್ಯಾಯಾಲಯದ ತೀರ್ಪು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ಆಡಳಿತ ನಡೆಸಲು ಅವಕಾಶವಿಲ್ಲ ಎಂಬ ಸ್ಪಷ್ಟ ಸಂದೇಶ ಸಾರಿದೆಯಲ್ಲದೇ, ದಿನಬೆಳಗಾದರೆ ಸಂವಿಧಾನದ ಬಗ್ಗೆ ಬೊಗಳೆ ಮಾತನಾಡುವವರಿಗೆ ತಕ್ಕ ಪಾಠ ಹೇಳಿದೆ.
ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳಿಗೆ ಕಾನೂನು ಸುವ್ಯವಸ್ಥೆಯ ಷರತ್ತು ವಿಧಿಸಿ ಅನುಮತಿ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಸಿರುಗಟ್ಟಿಸಲು ಹೋದರೆ ದೇಶದ ಸಂವಿಧಾನ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂಬ ಸಂದೇಶ ಇಂದಿನ ತೀರ್ಪಿನ ಮೂಲಕ ರವಾನೆಯಾಗಿದೆ, ರಾಷ್ಟ್ರಭಕ್ತ ಸಂಘಟನೆಗಳನ್ನು ಮೆಟ್ಟಿ ನಿಲ್ಲುವ ಕಾಂಗ್ರೆಸ್ ನ ಕುಟಿಲ ನೀತಿಯು ನ್ಯಾಯಾಲಯದ ತೀರ್ಪಿನಿಂದ ನಿಷ್ಕ್ರಿಯಗೊಂಡಂತಾಗಿದೆ ಎಂದು ವಿಜಯೇಂದ್ರ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

