Bengaluru : ಬೆಂಗಳೂರಿನ ಬಾಗಲೂರಿನಿಂದ ಮನೆ ಕೆಲಸದಾಕೆ ಗೂಫಿ ಎಂಬ ಸಾಕು ನಾಯಿಯನ್ನು ಕೊಂದ ಪ್ರಾಣಿ ಹಿಂಸೆಯ ಪ್ರಕರಣ ಬೆಳಕಿಗೆ ಬಂದಿದೆ. ಅಕ್ಟೋಬರ್ 31 ರಂದು ಅಪಾರ್ಟ್‌ಮೆಂಟ್ ಸಮುಚ್ಚಯವೊಂದರಲ್ಲಿ ನಡೆದ ಈ ಘಟನೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
ವೀಡಿಯೊದಲ್ಲಿ ಪುಷ್ಪಲತಾ ಎಂದು ಗುರುತಿಸಲಾದ ಆರೋಪಿ ನಾಯಿಯನ್ನು ಲಿಫ್ಟ್ ಒಳಗೆ ಎಸೆದು ಕ್ರೂರವಾಗಿ ಹಿಂಸಿಸುತ್ತಿರುವುದನ್ನು ತೋರಿಸಲಾಗಿದೆ. ಗೂಫಿ ಮಾಲೀಕ ರಾಶಿ ಪೂಜಾರಿ ನಂತರ ದೂರು ದಾಖಲಿಸಿದ್ದು, ಪೊಲೀಸರು ಬಾಗಲೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಸುಮಾರು ಒಂದೂವರೆ ತಿಂಗಳಿನಿಂದ ಕುಟುಂಬದೊಂದಿಗೆ ಕೆಲಸ ಮಾಡುತ್ತಿದ್ದ ಪುಷ್ಪಲತಾ, ಪ್ರಕರಣ ದಾಖಲಾದಾಗಿನಿಂದ ತಲೆಮರೆಸಿಕೊಂಡಿದ್ದಾರೆ.
ಎಂಬಿಎ ವಿದ್ಯಾರ್ಥಿನಿಯಾಗಿರುವ ರಾಶಿ ಪೂಜಾರಿ ಎಂಬವರು 4 ವರ್ಷದ ಹಿಂದೆ ಚಿಹೋವಾ ತಳಿಯ ಪುಟ್ಟ ಶ್ವಾನವನ್ನು ತಂದಿದ್ದು, ಸಾಕುತ್ತಿದ್ದಾರೆ. ಇದಕ್ಕೆ ಗೂಫಿ ಎಂದು ಹೆಸರಿಟ್ಟಿದ್ದಾರೆ. ರಾಶಿ ಪಾಲಿಗೆ ಈ ಗೂಫಿಯೇ ಮಗುವಾಗಿತ್ತು. ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಈ ಗೂಫಿ ಮಾಡುತ್ತಿದ್ದ ತುಂಟತನ ನೋಡುತ್ತಲೇ ರಾಶಿ ಖುಷಿ ಖುಷಿಯಾಗಿದ್ದರು. ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನೂ ಆಚರಿಸುತ್ತಿದ್ದರು. ಗೂಫಿ ಕೂಡ ಅವರ ಮನೆಯ ಒಬ್ಬ ಸದಸ್ಯನಾಗಿದ್ದ.
ಕಾಲೇಜಿಗೆ ಹೋದಾಗ, ಮನೆಯಲ್ಲಿ ಇಲ್ಲದೇ ಇರುವಾಗ ಗೂಫಿಯನ್ನು ನೋಡಿಕೊಳ್ಳಲೆಂದೇ ಪುಷ್ಪಲತಾ ಎಂಬಾಕೆಯನ್ನು ರಾಶಿ ಕೆಲಸಕ್ಕೆ ಇಟ್ಟುಕೊಂಡಿದ್ದರು. ಆದರೆ ಪುಷ್ಪಲತಾ ಇಂಥಾ ರಾಕ್ಷಸಿ ಎಂಬುದು ಗೊತ್ತಿರಲಿಲ್ಲ. ಅಕ್ಟೋಬರ್ 31 ರಂದು ನಾಯಿ ಮರಿ ಗೂಫಿಯನ್ನು ವಾಕಿಂಗ್ಗೆ ಕರೆದುಕೊಂಡು ಹೋಗುವಾಗ ಈ ಪುಷ್ಪಲತಾ, ನಾಯಿ ಮರಿಯನ್ನು ಕೊರಳಿಗೆ ಕಟ್ಟಿದ್ದ ಬೆಲ್ಟ್ ಹಿಡಿದು ಎತ್ತಿ ಫ್ಲೋರ್ಗೆ ಜೋರಾಗಿ ಬಡಿದಿದ್ದಾಳೆ. ಅಷ್ಟೇ, ಆ ನಾಯಿ ಅಲ್ಲೇ ಮೃತಪಟ್ಟಿದೆ.
ಪುಷ್ಪಲತಾಳ ಕ್ರೌರ್ಯದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಆಕೆ, ಮನೆಗೆ ಬಂದು ಕತೆ ಕಟ್ಟಿದ್ದಳು. ಲಿಫ್ಟ್ನಿಂದ ಬಿದ್ದು ಗೂಫಿ ಸತ್ತುಹೋಗಿದೆ ಎಂದು ಸುಳ್ಳು ಹೇಳಿದ್ದಳು. ಆದರೆ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಪುಷ್ಪಲತಾಳ ಅಸಲಿಯತ್ತು ಬಯಲಾಗಿದೆ. ಮಗುವಿನಂತೆ ಸಾಕಿದ್ದ ಗೂಫಿ ಈ ರೀತಿ ಕೊಲೆಯಾಗಿರುವುದನ್ನು ಕಂಡು ರಾಶಿ ಪೂಜಾರಿಗೆ ಬರಸಿಡಿಲೇ ಬಡಿದಂತಾಗಿದೆ. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

