ಶ್ರೀನಗರ: ದೆಹಲಿ ಕೆಂಪುಕೋಟೆ ಬಳಿ ಕಾರು ಸ್ಫೋಟ ಪ್ರಕರಣ ಮಾಸುವ ಮುನ್ನವೇ ಜಮ್ಮು ಮತ್ತು ಕಾಶ್ಮೀರದಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಶ್ರೀನಗರದ ನೌಗಮ್ ಪೊಲೀಸ್ ಠಾಣೆ(Nowgam Police Station)ಯಲ್ಲಿ ಉಂಟಾದ ಭಾರೀ ಸ್ಫೋಟದಲ್ಲಿ ಇಬ್ಬರು ಅಧಿಕಾರಿಗಳು ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಮತ್ತು ಗಾಯಗೊಂಡ ಅಧಿಕಾರಿಗಳಲ್ಲಿ ಕನಿಷ್ಠ ಆರು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಕಳೆದ ವಾರ ಹರಿಯಾಣದ ಫರಿದಾಬಾದ್‌ನಿಂದ ವಶಪಡಿಸಿಕೊಂಡ ಸ್ಫೋಟಕ ವಸ್ತುಗಳಿಂದ ಮಾದರಿಗಳನ್ನು ಸಂಗ್ರಹಿಸಲು ಮ್ಯಾಜಿಸ್ಟ್ರೇಟ್ ಮತ್ತು ವಿಧಿವಿಜ್ಞಾನ ಅಧಿಕಾರಿಗಳೊಂದಿಗೆ ಪೊಲೀಸ್ ತಂಡವು ಪ್ರಯತ್ನಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ.
ಶುಕ್ರವಾರ ತಡರಾತ್ರಿ 11:22ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಈವರೆಗೆ 9 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಫೋಟದ ಪ್ರಮಾಣ ಮತ್ತು ಕಾರಣದ ಬಗ್ಗೆ ಪೊಲೀಸರು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ವಶಪಡಿಸಿಕೊಂಡ ವಸ್ತುಗಳು ಸ್ಫೋಟಗೊಂಡಾಗ ರಾಜ್ಯ ತನಿಖಾ ಸಂಸ್ಥೆಯ (SIA) ತಂಡವು ನೌಗಮ್ ಪೊಲೀಸ್ ಠಾಣೆಗೆ ಆಗಮಿಸಿತ್ತು ಎಂದು ಮೂಲಗಳು ತಿಳಿಸಿವೆ. ಒಂದು ದಿನದ ಹಿಂದೆ ಪ್ರಕರಣದ ತನಿಖೆಯನ್ನು SIA ವಹಿಸಿಕೊಂಡಿತ್ತು.
ಭೀಕರ ಸ್ಫೋಟ ಶಬ್ಧಕ್ಕೆ ಸುತ್ತಮುತ್ತಲಿನ ಜನ ಬೆಚ್ಚಿಬಿದ್ದಿದ್ದಾರೆ. ಹಲವು ವಾಹನಗಳು ಬೆಂಕಿಗೆ ಆಹುತಿಯಾದವು. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮನೆಯ ಕಿಟಕಿ ಗಾಜುಗಳು ಹಾನಿಗೊಳಗಾದವು. ಜೊತೆಗೆ ಮಾನವ ದೇಹದ ಅವಶೇಷಗಳು ಸುಮಾರು 300 ಅಡಿ ದೂರದ ವರೆಗೆ ಚದುರಿತ್ತು ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.
ಸದ್ಯ ತನಿಖಾ ಸಂಸ್ಥೆಗಳು ಹಾಗೂ ಸ್ಥಳೀಯ ಪೊಲೀಸ್ ಇಲಾಖೆಯು ಐಇಡಿ (IED) ಪಿತೂರಿ ಅಥವಾ ಅಧಿಕಾರಿಗಳ ನಿರ್ಲಕ್ಷ್ಯ 2 ಆಯಾಮಗಳಲ್ಲಿ ಈ ಪ್ರಕರಣದ ತನಿಖೆ ನಡೆಸುತ್ತಿವೆ.

