Maithili Thakur : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಭರ್ಜರಿ ಗೆಲುವು ಕಂಡಿದೆ. ಬಿಹಾರದಲ್ಲಿ ಐತಿಹಾಸಿಕ ಜಯ ಕಂಡಿರುವ ಬಿಜೆಪಿ ಬಿಹಾರದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಬಾರಿ ಬಿಜೆಪಿ ಬೇರೆಲ್ಲ ರಾಜ್ಯಗಳಲ್ಲಿ ಮಾಡಿದ ರೀತಿಯಲ್ಲೇ ಬಿಹಾರದಲ್ಲೂ ಟಿಕೆಟ್ ಘೋಷಣೆ ವೇಳೆ ಹಲವು ಪ್ರಯೋಗಗಳನ್ನು ಮಾಡಿತ್ತು. ಅದರಲ್ಲಿ ಬಿಹಾರದ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಎಂಬ 25 ವರ್ಷದ ಯುವತಿಯನ್ನು ಕಣಕ್ಕೆ ಇಳಿಸಿದ್ದು ಕೂಡ ಒಂದು.
ಭಾರತೀಯ ಚುನಾವಣಾ ಆಯೋಗ (ECI) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಜನಪ್ರಿಯ ಗಾಯಕಿಯಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಮೈಥಿಲಿ ಠಾಕೂರ್ (25) ಅವರು ಅಲಿನಗರ ವಿಧಾನಸಭಾ ಕ್ಷೇತ್ರದಲ್ಲಿ 11,730 ಮತಗಳಿಂದ ಗೆದ್ದಿದ್ದಾರೆ. ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಠಾಕೂರ್, 84,915 ಮತಗಳನ್ನು ಪಡೆದು 73,185 ಮತಗಳನ್ನು ಗಳಿಸಿದ ಆರ್‌ಜೆಡಿ ಹಿರಿಯ ಅಭ್ಯರ್ಥಿ ಬಿನೋದ್ ಮಿಶ್ರಾ (63) ಅವರನ್ನು ಸೋಲಿಸಿದ್ದಾರೆ.
ರಿಯಾಲಿಟಿ ಶೋ ಒಂದರ ರನ್ನರ್ ಅಪ್ ಆಗಿದ್ದ ಮೈಥಿಲಿ ಠಾಕೂರ್ ಕಂಠಕ್ಕೆ ಬಹಳ ಅಭಿಮಾನಿಗಳಿದ್ದರು. ಆದರೆ, ಆ ಅಭಿಮಾನ ಮತವಾಗಿ ಬದಲಾಗುತ್ತಾ? ಎಂಬ ಅನುಮಾನವಂತೂ ಇದ್ದೇ ಇತ್ತು. ಇದೀಗ ಅದೇ ಮೈಥಿಲಿ ಠಾಕೂರ್ ಚುನಾವಣಾ ಕಣಕ್ಕೆ ಇಳಿದ ಮೊದಲ ಪ್ರಯತ್ನದಲ್ಲೇ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಭಾರತದ ಅತ್ಯಂತ ಕಿರಿಯ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜಾನಪದ ಗಾಯಕಿಯಾಗಿರುವ ಮೈಥಿಲಿ ಠಾಕೂರ್ 2000ನೇ ಇಸವಿಯ ಜುಲೈ 25ರಂದು ಮಧುಬನಿಯಲ್ಲಿ ಜನಿಸಿದ ಮೈಥಿಲಿ ಠಾಕೂರ್ ಅವರ ಕುಟುಂಬವು ದೆಹಲಿಯ ನಜಾಫ್‌ಗಢಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅವರ ತಂದೆ ಕೆಲಸ ಕಳೆದುಕೊಂಡ ಕಾರಣ ಅವರು ಆರ್ಥಿಕ ಸಮಸ್ಯೆಗಳನ್ನು ಎದುರಿಸಿದರು. ಸ್ವತಃ ಶಾಸ್ತ್ರೀಯ ಗಾಯಕರಾಗಿದ್ದ ಅವರ ತಂದೆ ತಮ್ಮ ಕುಟುಂಬವನ್ನು ಪೋಷಿಸಲು ಸಂಗೀತದತ್ತ ಮುಖ ಮಾಡಿದರು. ಅವರು ಮೈಥಿಲಿಯ ಮಾರ್ಗದರ್ಶಕ ಮತ್ತು ಶಿಕ್ಷಕರೂ ಆಗಿದ್ದರು.

