ಬೆಂಗಳೂರು: ಬೆಂಗಳೂರು ನಗರದಲ್ಲಿ ಮತ್ತೊಮ್ಮೆ ಭಾರೀ ಮಟ್ಟದ ಸೈಬರ್ ವಂಚನೆ (cyber fraud) ಬೆಳಕಿಗೆ ಬಂದಿದೆ. ನಗರದ ಇಂದಿರಾನಗರದಲ್ಲಿ ವಾಸಿಸುತ್ತಿರುವ ಐಟಿ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬರಿಗೆ ಸೈಬರ್ ಕಳ್ಳರು ಬರೋಬ್ಬರಿ ₹31 ಕೋಟಿ ರೂಪಾಯಿ ವಂಚಿಸಿರುವ ಘಟನೆ ಹೊರಬಿದ್ದಿದೆ. ರಾಜ್ಯದಲ್ಲಿ ದಾಖಲಾದ ಸೈಬರ್ ವಂಚನೆ ಪ್ರಕರಣಗಳಲ್ಲಿ ಇದು ಅತಿದೊಡ್ಡ ಘಟನೆಯೆಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಂದ ಲಭಿಸಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಕಳ್ಳರು ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಮಹಿಳೆಯನ್ನು ಹಣ ವರ್ಗಾವಣೆ ಮಾಡಲು ಪ್ರೇರೇಪಿಸಿದ್ದಾರೆ. ಹಲವಾರು ಹಂತಗಳಲ್ಲಿ ಖಾತೆಗಳನ್ನು ತೆರೆಯಲು, ಪರಿಶೀಲನೆ ಮಾಡಲು ಹೇಳಿ ಒಟ್ಟು 180ಕ್ಕಿಂತಲೂ ಹೆಚ್ಚು ಆನ್‌ಲೈನ್ ಟ್ರಾನ್ಸಾಕ್ಷನ್‌ಗಳು ನಡೆಸಲ್ಪಟ್ಟಿವೆ.
ಈ ಮೂಲಕ, ಅವಳ ಖಾತೆಯಿಂದ ಲಕ್ಷಾಂತರ ರೂಪಾಯಿಗಳನ್ನು ನಿಧಾನವಾಗಿ ಹೊರತೆಗೆದು ಅಂತಿಮವಾಗಿ ಒಟ್ಟು ಮೊತ್ತ ₹31 ಕೋಟಿ ದಾಟಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಘಟನೆ ಬಹಿರಂಗವಾದ ಕೂಡಲೇ ಮಹಿಳೆ ಪೂರ್ವ ವಿಭಾಗದ ಸೆನ್ (Central East Division – Cyber Economic and Narcotics) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಐಟಿ ತಂಡಗಳೊಂದಿಗೆ ಸೇರಿ ತಕ್ಷಣವೇ ತನಿಖೆ ಕೈಗೊಂಡಿದ್ದು, ಮೊತ್ತ ಹೋಗಿರುವ ಬ್ಯಾಂಕ್ ಖಾತೆಗಳ ಹಾದಿ ಹತ್ತಲು ಪ್ರಯತ್ನ ನಡೆಯುತ್ತಿದೆ.
ಹಣ ವಾಪಸ್ಸು ಮಾಡಿಸುವ ಪ್ರಯತ್ನ – ಗೃಹ ಸಚಿವ ಪರಮೇಶ್ವರ್
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಹೇಳಿದ್ದಾರೆ. “ಪ್ರಕರಣ ಅತ್ಯಂತ ಗಂಭೀರ. ಹಣ ಎಲ್ಲಿ ಹೋಗಿದೆ ಎಂಬುದನ್ನು ಪತ್ತೆಹಚ್ಚಲು ಸೈಬರ್ ತಂಡಗಳಿಗೆ ನಿರ್ದೇಶನ ನೀಡಲಾಗಿದೆ. ಸಾಧ್ಯವಾದಷ್ಟು ಹಣ ವಾಪಸ್ ಮಾಡಿಸುವ ಪ್ರಯತ್ನ ನಡೆಯುತ್ತಿದೆ,” ಎಂದು ತಿಳಿಸಿದ್ದಾರೆ.

