ಅಥಣಿ (ಬೆಳಗಾವಿ ಜಿಲ್ಲೆ): “ಸಚಿವ ಸ್ಥಾನ ಬೇಡ ಅನ್ನೋದಕ್ಕೆ ನಾನೇನು ಸನ್ಯಾಸಿ ಅಲ್ಲ, ನಾನು ರಾಜಕಾರಣಿ,” ಎಂದು ಶಾಸಕ ಲಕ್ಷ್ಮಣ ಸವದಿ ಅವರು ಸ್ಪಷ್ಟಪಡಿಸಿದ್ದಾರೆ. ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲವೆಂಬ ಮಾತುಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ, ಅವರು ತಮ್ಮ ನಿಲುವನ್ನು ಹೀಗಾಗಿ ತಿಳಿಸಿದರು.
ಹೊಸ ಸಚಿವ ಸಂಪುಟ ರಚನೆ ಕುರಿತು ಮಾತನಾಡಿದ ಅವರು,“ಸಚಿವ ಸ್ಥಾನ ನೀಡುವುದು ವರಿಷ್ಠರ ನಿರ್ಧಾರ. ನಾನು ಯಾವುದೇ ಅಪೇಕ್ಷೆ ಪಟ್ಟಿಲ್ಲ. ಆದರೆ ಬೇಡ ಎನ್ನುವುದಕ್ಕೂ ಸನ್ಯಾಸಿಯಾಗಿಲ್ಲ,” ಎಂದು ಹೇಳಿದರು.
ಮುಂದೆ ಮಾತನಾಡಿದ ಅವರು—“ನೂತನ ಸಚಿವ ಸಂಪುಟ ರಚನೆ ವಿಚಾರ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳ ಚರ್ಚೆಗೆ ಸಂಬಂಧಿಸಿದೆ. ಚಳಿಗಾಲದ ಅಧಿವೇಶನ ಮುಗಿದ ನಂತರವೇ ಈ ಬಗ್ಗೆ ಸ್ಪಷ್ಟತೆ ಬರಬಹುದು. ಈಗಾಗಲೇ ಯಾವುದೇ ಚಟುವಟಿಕೆಗಳು ನಡೆಯುತ್ತಿರುವುದಾಗಿ ನನಗೆ ತಿಳಿದಿಲ್ಲ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ಸಚಿವ ಸಂಪುಟ ವಿಸ್ತರಣೆ ಅಧಿವೇಶನದ ನಂತರ ಸಾಧ್ಯವೆಂದು ತಿಳಿಸಿದರು.
ವರದಿ : ಸೂರಜ ಕೋರೆ, ಚಿಕ್ಕೋಡಿ ವರದಿಗಾರರು

