ಮುಂಬೈ : ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್‌ನ ಹೀ-ಮ್ಯಾನ್, ಎವರ್‌ಗ್ರೀನ್ ಸ್ಟಾರ್, ಹಿರಿಯ ನಟ ಧರ್ಮೇಂದ್ರ (Dharmendra) (89) ಅವರು ಸೋಮವಾರ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಉಸಿರಾಟದ ಗಂಭೀರ ತೊಂದರೆಯ ಹಿನ್ನೆಲೆಯಲ್ಲಿ ಬೆಳಿಗ್ಗೆ ಆರೋಗ್ಯ ಹದಗೆಟ್ಟಿದ್ದ ಅವರನ್ನು ತಕ್ಷಣ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ವೈದ್ಯರ ಪ್ರಯತ್ನ ಫಲಿಸಲಿಲ್ಲ.
ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್‌ಖಡ್, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಧರ್ಮೇಂದ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ಡಿಸೆಂಬರ್ 8ರಂದು 90ನೇ ವಯಸ್ಸಿಗೆ ಕಾಲಿಡಲಿದ್ದ ನಟ ಧರ್ಮೇಂದ್ರ ಅವರು ಕಳೆದ ವಾರವೂ ಉಸಿರಾಟ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ಏಪ್ರಿಲ್‌ನಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು.
ಆರು ದಶಕಗಳನ್ನು ಒಳಗೊಂಡ ತಮ್ಮ ದೀರ್ಘ ವೃತ್ತಿಜೀವನದಲ್ಲಿ ಧರ್ಮೇಂದ್ರ ಅವರು ಹಿಂದಿ ಚಿತ್ರರಂಗದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.
1960ರಲ್ಲಿ ದಿಲ್ ಭೀ ತೇರಾ ಹಮ್ ಭೀ ತೇರೇ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ ಅವರು ಬಂಧಿನಿ, ಅನುಪಮಾ, ಶೋಲೆ, ಚುಪ್ಕೆ ಚುಪ್ಕೆ, ಮೇರಾ ಗಾಂವ್ ಮೇರಾ ದೇಶ್, ಡ್ರೀಮ್ ಗರ್ಲ್ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿ ಅಸಂಖ್ಯಾತ ಪ್ರೇಕ್ಷಕರ ಮನ ಗೆದ್ದಿದ್ದಾರೆ.
2025ರ ಆರಂಭದಲ್ಲಿ ಶಾಹಿದ್ ಕಪೂರ್–ಕೃತಿ ಸನೋನ್ ಅಭಿನಯದ ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ ಸಿನಿಮಾದಲ್ಲಿ ಅವರು ಕೊನೆಯ ಬಾರಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಡಿಸೆಂಬರ್ 25ರಂದು ಬಿಡುಗಡೆಯಾಗಲಿರುವ ಇಕ್ಕಿಸ್ ಚಿತ್ರದಲ್ಲೂ ಅವರು ಅಭಿನಯಿಸಿದ್ದರು.
ಪಂಜಾಬ್‌ನ ಸಾಮಾನ್ಯ ಕುಟುಂಬದಲ್ಲಿ 1935ರಲ್ಲಿ ಜನಿಸಿದ ಧರ್ಮೇಂದ್ರ ದೇವಲ್, 1950ರ ದಶಕದ ಕೊನೆಯಲ್ಲಿ ನಟನೆಯತ್ತ ಪಾದಾರ್ಪಣೆ ಮಾಡಿ ಬಾಲಿವುಡ್‌ನ ಅತ್ಯಂತ ಪ್ರೀತಿಯ ತಾರೆಯಾಗಿ ಬೆಳೆದರು. ಶೋಲೆ, ಸತ್ಯಕಾಮ್, ಚುಪ್ಕೆ ಚುಪ್ಕೆ, ಯಾದೋನ್ ಕಿ ಬಾರಾತ್ ನಂತಹ ಶಾಶ್ವತ ಚಿತ್ರಗಳು ಅವರನ್ನು ಮನೆಮಾತು ಮಾಡಿದವು.
ಧರ್ಮೇಂದ್ರ ಅವರ ವೈಯಕ್ತಿಕ ಬದುಕೂ ಚಲನಚಿತ್ರದಷ್ಟು ರೋಚಕವಾಗಿತ್ತು. ಮೊದಲ ಪತ್ನಿ ಪ್ರಕಾಶ್ ಕೌರ್ ಅವರೊಂದಿಗೆ ಸನ್ನಿ ದೇವಲ್, ಬಾಬಿ ದೇವಲ್, ವಿಜೇತಾ ಮತ್ತು ಅಜೀತಾ ಎಂಬ ನಾಲ್ವರು ಮಕ್ಕಳಿದ್ದಾರೆ. ನಂತರ ಬಾಲಿವುಡ್‌ನ ಡ್ರೀಮ್ ಗರ್ಲ್ ಹೇಮಾ ಮಾಲಿನಿಯನ್ನು ವಿವಾಹವಾದ ಅವರು, ಎಶಾ ದೇವಲ್ ಮತ್ತು ಅಹಾನಾ ದೇವಲ್ ಎಂಬ ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿದ್ದಾರೆ.
ಅವರ ಪುತ್ರ ಸನ್ನಿ ದೇವಲ್ ‘ಘಾಯಲ್’, ‘ಗಾದರ್’, ‘ಬಾರ್ಡರ್’ ಮುಂತಾದ ಹಿಟ್‌ಗಳಿಂದ ಪ್ರಮುಖ ಆಕ್ಷನ್ ತಾರೆಯಾದರೆ, ಬಾಬಿ ದೇವಲ್ ‘ಬರ್ಸಾತ್’, ‘ಗುಪ್ತ್’, ‘ಸೋಲ್ಜರ್’ ಚಿತ್ರಗಳಿಂದ ಜನಪ್ರಿಯರಾದರು. ನಂತರ ‘ಆಶ್ರಮ್’ ಮತ್ತು ‘ಅನಿಮಲ್’ ಮೂಲಕ ಸಂದರ್ಶಕರ ಮೆಚ್ಚುಗೆ ಪಡೆಯುವ ಮೂಲಕ ಪುನರಾಗಮನ ಮಾಡಿದರು.ವೃತ್ತಿಜೀವನದಲ್ಲಿ 238 ಚಿತ್ರಗಳಲ್ಲಿ ನಟಿಸಿದ ಧರ್ಮೇಂದ್ರ, 93 ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಶೋಲೆ (1975) ಚಿತ್ರದ ‘ವೀರು’ ಪಾತ್ರದಲ್ಲಿನ ಅವರ ಅಮೋಘ ನಟನೆ ಇಂದಿಗೂ ಸಿನಿ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅಪ್ರತಿಮ ತಾರೆಗಳ ಬಳಗದಲ್ಲಿ ಕೂಡ ಧರ್ಮೇಂದ್ರ ಅವರ ಅಭಿನಯವೇ ಚಿತ್ರದ ಮುಖ್ಯ ಆಕರ್ಷಣೆಯಾಗಿ ಹೊರಹೊಮ್ಮಿತ್ತು. ಭಾರತೀಯ ಚಿತ್ರರಂಗಕ್ಕೆ ಮಹತ್ತರ ಕೊಡುಗೆ ನೀಡಿದ ಧರ್ಮೇಂದ್ರ ಅವರ ಅಗಲಿಕೆ ಬಾಲಿವುಡ್‌ಗೆ ಅಪಾರ ನಷ್ಟವಾಗಿದೆ.

