ದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ (Parliament Winter Session) ಆರಂಭಕ್ಕೂ ಮುನ್ನವೇ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ವಿರೋಧ ಪಕ್ಷಗಳ ನಡೆ–ನುಡಿ ಬಗ್ಗೆ ತೀಕ್ಷ್ಣ ಟೀಕೆ ವ್ಯಕ್ತಪಡಿಸಿದ್ದು, “ಸಂಸತ್ತಿನಲ್ಲಿ ನಾಟಕ ಬೇಡ” ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶದ ಹಿನ್ನೆಲೆ ಮಾತನಾಡಿದ ಪ್ರಧಾನಿ ಮೋದಿ, “ಭಾರತ ಪ್ರಜಾಪ್ರಭುತ್ವದಲ್ಲಿ ಜೀವಂತವಾಗಿರುವ ರಾಷ್ಟ್ರ. ಪ್ರಜಾಪ್ರಭುತ್ವದ ಶಕ್ತಿ ಮಹಿಳೆಯರ ಮತದಾನದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಬಿಹಾರದಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಭಾರತೀಯ ಪ್ರಜಾಪ್ರಭುತ್ವದ ಬಲವನ್ನು ಇನ್ನಷ್ಟು ದೃಢಪಡಿಸಿದೆ” ಎಂದು ಹೇಳಿದರು.
ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ
ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೆಲ ವಿರೋಧ ಪಕ್ಷಗಳು ಬಿಹಾರ ಚುನಾವಣೆಯ ಸೋಲನ್ನು ಅರಗಿಸಿಕೊಳ್ಳಲಾಗದೆ ಹತಾಶೆಯಿಂದ ವರ್ತಿಸುತ್ತಿವೆ ಎಂದು ಆರೋಪಿಸಿದರು.
“ಅಧಿವೇಶನವು ಹತಾಶೆ ಹೊರಹಾಕುವ ವೇದಿಕೆಯಾಗಬಾರದು. ಅದೇ ರೀತಿ ಗೆಲುವಿನ ಮೇಲಿನ ದುರಹಂಕಾರ ತೋರಿಸುವ ಸ್ಥಳವೂ ಅಲ್ಲ. ನಾವು ಸಮತೋಲನವನ್ನು ಕಾಯ್ದುಕೊಳ್ಳಬೇಕು” ಎಂದು ಸಲಹೆ ನೀಡಿದರು. ವಿರೋಧ ಪಕ್ಷಗಳಿಗೆ ಅಗತ್ಯವಿದ್ದರೆ ಸಲಹೆ ನೀಡಲು ತಾವು ಸಿದ್ಧರಿದ್ದೇವೆ, ಆದರೆ ಸದನದ ಕಾರ್ಯನಿರ್ವಹಣೆಗೆ ಅಡ್ಡಿ ತರಬಾರದು ಎಂದು ಅವರು ಸ್ಪಷ್ಟಪಡಿಸಿದರು.
SIR ಪರಿಷ್ಕರಣೆ, ಹೊಸ ಮಸೂದೆಗಳಿಂದ ಅಧಿವೇಶನಕ್ಕೆ ಮಹತ್ವ
ಈ ಬಾರಿಯ ಚಳಿಗಾಲದ ಅಧಿವೇಶನಕ್ಕೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಚರ್ಚೆಗೆ ಬರಲಿರುವುದು, ಜೊತೆಗೆ 10 ಹೊಸ ಮಸೂದೆಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಸಿದ್ದತೆ ನಡೆಸಿರುವುದು ಹೆಚ್ಚು ಗಮನ ಸೆಳೆದಿದೆ.
ಅಲ್ಲದೆ ವಂದೇ ಮಾತರಂ ಗೀತೆಯ 150 ವರ್ಷದ ಸಂಭ್ರಮಾಚರಣೆ ಕುರಿತು ಚರ್ಚೆ ನಡೆಸುವ ಅವಕಾಶ ನೀಡುವ ಕುರಿತು ನಿರ್ಧಾರ ಕೂಡಾ ಪ್ರಮುಖವಾಗಿದೆ.
ಮೋದಿ ಪ್ರತಿಕ್ರಿಯೆ ನೀಡುತ್ತಾ, “SIR ಬಗ್ಗೆ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಆದರೂ ಚರ್ಚೆಯನ್ನು ಸುಗಮವಾಗಿ ನಡೆಸಲು ಸರ್ಕಾರ ಬದ್ಧವಾಗಿದೆ. ಭಿನ್ನಾಭಿಪ್ರಾಯಗಳ ಕಾರಣಕ್ಕೆ ಸದನದ ಉತ್ಪಾದಕತೆಯನ್ನು ವಿಘ್ನಪಡಿಸಬಾರದು” ಎಂದು ಹೇಳಿದರು.
‘ದಯವಿಟ್ಟು ನಾಟಕ ಬೇಡ’ — ಪ್ರಧಾನಿ ಮೋದಿ
ವಿರೋಧ ಪಕ್ಷಗಳ ಸದಸ್ಯರಿಗೆ ನೇರ ಮನವಿ ಮಾಡಿದ್ದ ಪ್ರಧಾನಿ ಮೋದಿ, “ಸಂಸತ್ತಿನಲ್ಲಿ ನಾಟಕ ಬೇಡ. ಚುನಾವಣೆಯಲ್ಲಿ ಬಯಸಿದ ಫಲಿತಾಂಶ ಸಿಗದಿದ್ದರೆ ತಂತ್ರ ಬದಲಿಸಬೇಕು. ಸದನದ ಗೌರವ ಕಾಪಾಡುವುದು ಎಲ್ಲರ ಜವಾಬ್ದಾರಿ” ಎಂದು ತರಾಟೆಗೆ ತೆಗೆದುಕೊಂಡರು.
ಬಿಹಾರದಲ್ಲಿ ಎನ್‌ಡಿಎ ಭರ್ಜರಿ ವಿಜಯ
ಇತ್ತೀಚಿಗೆ ನಡೆದ 2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಭಾರಿ ಗೆಲುವು ದಾಖಲಿಸಿದ್ದು—243 ಸ್ಥಾನಗಳಲ್ಲಿ 202 ಸ್ಥಾನಗಳನ್ನು ಗೆದ್ದಿದೆ. ಇದೇ ವೇಳೆ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಕೇವಲ 35 ಸ್ಥಾನಗಳಿಗೆ ಸೀಮಿತವಾಗಿದೆ.

