ಬೆಂಗಳೂರು: ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾದ ಜವಾಬ್ದಾರಿ ಕೇಂದ್ರ ಸರ್ಕಾರದ್ದೇ ಆಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಕಬ್ಬು ಬೆಳೆಗಾರರ ಸಂಕಷ್ಟ, ಮೆಕ್ಕೆಜೋಳದ ಸಮಸ್ಯೆ ಸೇರಿದಂತೆ ಹಲವು ವಿಷಯಗಳಲ್ಲಿ ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ರಾಜ್ಯದ ಹಿತಕ್ಕಾಗಿ ದುಬಾರಿ ತೀರ್ಮಾನಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದರೂ ಕೇಂದ್ರ ಸರ್ಕಾರ ಇನ್ನೂ ಬಾಯಿ ಬಿಟ್ಟಿಲ್ಲ ಎಂದು ಆರೋಪಿಸಿದರು. “ಬಿಜೆಪಿಯ ಸಂಸದರು ರಾಜ್ಯದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿಲ್ಲ. ಬೊಮ್ಮಾಯಿ ಅವರು ಸರ್ಕಾರವೇ ಖರೀದಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಹಾಗಾದರೆ ಕೇಂದ್ರ ಸರ್ಕಾರದ ಪಾಲು ಏನು? ಪ್ರತಿಯೊಂದು ಬೆಲೆಯಲ್ಲಿ ನಿಗದಿಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಆದರೂ ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ,” ಎಂದು ಪ್ರಶ್ನಿಸಿದರು.
ಮುಂದುವರಿದು, “ಪರಿಹಾರ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ, ಆದರೆ ಕೇಂದ್ರ ಸರ್ಕಾರಕ್ಕೂ ಜವಾಬ್ದಾರಿ ಇದೆ. ಬೊಮ್ಮಾಯಿ ಅವರು ಯಾಕೆ ಸಂಸತ್ತಿನಲ್ಲಿ ಈ ವಿಷಯವನ್ನು ಎತ್ತಿಲ್ಲ? ಪ್ರಧಾನಮಂತ್ರಿ ಹಾಗೂ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿಲ್ಲ?” ಎಂದು ಡಿಕೆಶಿ ಹಿಗ್ಗಾಮುಗ್ಗಾ ಪ್ರಶ್ನಿಸಿದರು.
ಇನ್ನೂ ಮಾತನಾಡಿದ ಅವರು, “ನನ್ನ ಅವಧಿಯಲ್ಲಿ ನೀರಾವರಿ ಯೋಜನೆಗಳಿಗೆ ಮಾಡಿದಷ್ಟು ಯೋಜನೆಗಳನ್ನು ಇತಿಹಾಸದಲ್ಲೇ ಯಾರೂ ಮಾಡಿಲ್ಲ. ಈ ಬಗ್ಗೆ ನಾನು ಮಾಧ್ಯಮಗಳ ಮುಂದೆ ಮಾತನಾಡುವುದಿಲ್ಲ. ವಿರೋಧ ಪಕ್ಷಗಳು ಅಧಿವೇಶನದಲ್ಲಿ ಪ್ರಸ್ತಾಪಿಸಿದರೆ ಅಲ್ಲಿ ಉತ್ತರಿಸುತ್ತೇನೆ,” ಎಂದು ಸ್ಪಷ್ಟಪಡಿಸಿದರು.

