ನಗರ: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ದ್ವೇಷ ಭಾಷಣ ನಿಷೇಧ ಕಾಯ್ದೆ ಸಂವಿಧಾನಬದ್ಧವಾಗಿಲ್ಲವೆಂದು ಆರೋಪಿಸಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಈ ಕಾಯ್ದೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದ್ವೇಷ ಎಂಬುದರ ಸ್ಪಷ್ಟ ವ್ಯಾಖ್ಯಾನವನ್ನು ಕಾಯ್ದೆಯಲ್ಲಿ ಎಲ್ಲೂ ನೀಡಿಲ್ಲ. ಆದರೂ ಕಾಯ್ದೆಯನ್ನು ಜಾರಿಗೆ ತರುವುದು ಅಸಂಗತ. ಹಿಂದೂ ಧರ್ಮದ ಪರವಾಗಿ ಮಾತನಾಡುವುದು, ಮಂತಾಂತರ ಹಾಗೂ ಲವ್ ಜಿಹಾದ್ ವಿರುದ್ಧ ಧ್ವನಿ ಎತ್ತುವುದು ತಪ್ಪೇ?” ಎಂದು ಪ್ರಶ್ನಿಸಿದರು. ಸಂವಿಧಾನವು ನಾಗರಿಕರಿಗೆ ಮಾತನಾಡುವ ಹಕ್ಕನ್ನು ನೀಡಿದೆ ಎಂದು ಉಲ್ಲೇಖಿಸಿದ ಅವರು, ಈ ಹಿನ್ನಲೆಯಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದರು.
ಡಿ.31ರಂದು ಹೊಸ ವರ್ಷ ಆಚರಣೆಯನ್ನು ಪಾಶ್ಚಾತ್ಯ ಸಂಸ್ಕೃತಿಯ ಅಸಹ್ಯ ಆಚರಣೆಯೆಂದು ಟೀಕಿಸಿದ ಮುತಾಲಿಕ್, ಯುವಕ-ಯುವತಿಯರು ಇಂತಹ ಆಚರಣೆಗಳಿಗೆ ಮಾರು ಹೋಗದೇ, ಹಿಂದೂ ಸಂಪ್ರದಾಯದಂತೆ ಯುಗಾದಿಯಂದು ಹೊಸ ವರ್ಷ ಆಚರಿಸಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದಿರುವ ಹಿಂಸಾಚಾರವನ್ನು ಉಲ್ಲೇಖಿಸಿದ ಅವರು, ಇಂತಹ ಘಟನೆಗಳನ್ನು ತಡೆಯಲು ಹಾಗೂ ಹಿಂದೂಗಳ ರಕ್ಷಣೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

