ನವದೆಹಲಿ, ಡಿಸೆಂಬರ್ 25: ಕರ್ನಾಟಕದ ಇಂದಿರಾ ಕ್ಯಾಂಟೀನ್ ಮಾದರಿಯನ್ನು ಅನುಸರಿಸಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜಯಂತಿಯ ಅಂಗವಾಗಿ ದೆಹಲಿ ಸರ್ಕಾರ ಇಂದು ರಾಜಧಾನಿಯಲ್ಲಿ 100 ಹೊಸ ‘ಅಟಲ್ ಕ್ಯಾಂಟೀನ್’ಗಳನ್ನು ಆರಂಭಿಸಿದೆ. ಈ ಕ್ಯಾಂಟೀನ್‌ಗಳಲ್ಲಿ ಕೇವಲ 5 ರೂ.ಗೆ ಪೌಷ್ಟಿಕ ಆಹಾರ ದೊರೆಯಲಿದೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಲಾಜಪತ್ ನಗರದ ನೆಹರೂ ನಗರದಲ್ಲಿ ಮೊದಲ ಅಟಲ್ ಕ್ಯಾಂಟೀನ್‌ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಆಶಿಷ್ ಸೂದ್, ಭಾರತೀಯ ಜನತಾ ಪಕ್ಷದ ಚುನಾವಣಾ ಭರವಸೆಯಂತೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು. ಪ್ರತಿಯೊಂದು ಕ್ಯಾಂಟೀನ್‌ನಲ್ಲಿ ದಿನಕ್ಕೆ ಸುಮಾರು 500 ಜನರಿಗೆ ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಒಟ್ಟಾರೆ ದಿನಕ್ಕೆ ಸುಮಾರು ಒಂದು ಲಕ್ಷ ಜನರಿಗೆ ಆಹಾರ ಒದಗಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಅಟಲ್ ಕ್ಯಾಂಟೀನ್‌ಗಳಲ್ಲಿ ರೊಟ್ಟಿ, ದಾಲ್, ತರಕಾರಿ, ಅನ್ನ ಹಾಗೂ ಉಪ್ಪಿನಕಾಯಿ ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರ ಲಭ್ಯವಿರುತ್ತದೆ. ಒಂದು ಊಟದ ನಿಜವಾದ ವೆಚ್ಚ ಸುಮಾರು 30 ರೂ. ಆಗಿದ್ದರೂ, ಸರ್ಕಾರದ ಸಬ್ಸಿಡಿಯಿಂದ 5 ರೂ.ಗೆ ಊಟ ನೀಡಲಾಗುತ್ತಿದೆ. ಈ ಕ್ಯಾಂಟೀನ್‌ಗಳನ್ನು ನಗರದಲ್ಲಿನ ಪ್ರಮುಖ ಪ್ರದೇಶಗಳ ಸಮೀಪ ಸ್ಥಾಪಿಸಲಾಗಿದ್ದು, ದೆಹಲಿ ಅರ್ಬನ್ ಶೆಲ್ಟರ್ ಇಂಪ್ರೂವ್‌ಮೆಂಟ್ ಬೋರ್ಡ್ (DUSIB) ಇವುಗಳ ನಿರ್ವಹಣೆಯ ಹೊಣೆ ಹೊತ್ತಿದೆ.
“ಯಾರೂ ಹಸಿವಿನಿಂದ ಮಲಗಬಾರದು” ಎಂಬ ಉದ್ದೇಶದಿಂದ ಆರಂಭವಾದ ಈ ಯೋಜನೆ ದೆಹಲಿಯ ಬಡ ಮತ್ತು ದುರ್ಬಲ ವರ್ಗದ ಜನರಿಗೆ ಮಹತ್ವದ ನೆರವಾಗಲಿದೆ. ಈ ಯೋಜನೆ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬಡವರ ಮೇಲಿದ್ದ ಕಾಳಜಿ ಹಾಗೂ ಸಾಮಾಜಿಕ ನ್ಯಾಯದ ಚಿಂತನೆಗೆ ಜೀವಂತ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದರು.

