ಕಾಗವಾಡ ಶಾಸಕ ರಾಜು ಕಾಗೆ ಅವರ ಪುತ್ರಿ ತೃಪ್ತಿ ಕಾಗೆಯಿಂದ ಸರ್ಕಾರಿ ವಾಹನದ ದುರ್ಬಳಕೆ ನಡೆದಿರುವ ಆರೋಪಗಳು ಕೇಳಿಬಂದಿವೆ. ಶಾಸಕರ ಸರ್ಕಾರಿ ವಾಹನದಲ್ಲಿ ರಾಜಾರೋಷವಾಗಿ ಸಂಚರಿಸುತ್ತಿರುವ ದೃಶ್ಯಗಳು ಚಿಕ್ಕೋಡಿ ಪಟ್ಟಣದಲ್ಲಿ ಸಂಪೂರ್ಣವಾಗಿ ನ್ಯೂಸ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲ್ಪಟ್ಟಿವೆ.
ವಾಯುವ್ಯ ಸಾರಿಗೆ ನಿಗಮ ಮಂಡಳಿ ಅಧ್ಯಕ್ಷರಾಗಿರುವ ಶಾಸಕ ರಾಜು ಕಾಗೆ ಅವರ ಮಗಳು ಸರ್ಕಾರಿ ವಾಹನವನ್ನು ಖಾಸಗಿ ಉದ್ದೇಶಕ್ಕೆ ಬಳಸಿಕೊಂಡಿರುವುದು ಜನರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಜನರು ಕಟ್ಟುವ ತೆರಿಗೆಯ ಹಣದಿಂದ ಸೌಲಭ್ಯ ಪಡೆದು ಜನಪರ ಕೆಲಸ ಮಾಡಬೇಕಾದವರು, ಅದನ್ನು ವೈಯಕ್ತಿಕ ಅಂದಾದರ್ಬಾರ್‌ಗೆ ಬಳಸುವುದು ಎಷ್ಟು ನ್ಯಾಯಸಮ್ಮತ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
“ಯಾರದೋ ದುಡ್ಡು, ಯಲ್ಲಮ್ಮನ ಜಾತ್ರೆ” ಎನ್ನುವ ಮಾತು ಇಲ್ಲಿ ಅಕ್ಷರಶಃ ಸತ್ಯವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ವಾಹನಗಳನ್ನು ಕೇವಲ ಅಧಿಕೃತ ಹಾಗೂ ಸಾರ್ವಜನಿಕ ಸೇವೆಗಾಗಿ ಮಾತ್ರ ಬಳಸಬೇಕು ಎಂಬ ನಿಯಮಗಳಿದ್ದರೂ, ಅವುಗಳ ಉಲ್ಲಂಘನೆ ನಡೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿಬಂದಿದೆ.
ವರದಿ : ಸೂರಜ ಕೋರೆ
ಚಿಕ್ಕೋಡಿ ವರದಿಗಾರರು

