ಬೆಂಗಳೂರು: ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಮದ್ಯ ಮಾರಾಟದಿಂದ ಭರ್ಜರಿ ಅಬಕಾರಿ ಆದಾಯ ಲಭಿಸಿದೆ. ಕಳೆದ ವರ್ಷದ ಹೋಲಿಕೆಯಲ್ಲಿ ಈ ವರ್ಷದ ಡಿಸೆಂಬರ್‌ನಲ್ಲಿ ಒಟ್ಟು 454.58 ಕೋಟಿ ರೂ. ಹೆಚ್ಚುವರಿ ಅಬಕಾರಿ ಆದಾಯ (Excise Revenue) ಸಂಗ್ರಹವಾಗಿದೆ.
2024ರ ಡಿಸೆಂಬರ್ 30ರಂದು 154.04 ಕೋಟಿ ರೂ., ಡಿಸೆಂಬರ್ 31ರಂದು 266.73 ಕೋಟಿ ರೂ. ಆದಾಯ ದಾಖಲಾಗಿತ್ತು. ಆದರೆ ಈ ಬಾರಿ ಡಿಸೆಂಬರ್ 30ರಂದು 261.09 ಕೋಟಿ ರೂ., ಡಿಸೆಂಬರ್ 31ರಂದು 204.10 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.
ಡಿಸೆಂಬರ್ ತಿಂಗಳ ಒಟ್ಟು ಅಂಕಿ-ಅಂಶಗಳತ್ತ ಗಮನಹರಿಸಿದರೆ, 2024ರ ಡಿಸೆಂಬರ್‌ನಲ್ಲಿ 3,104 ಕೋಟಿ ರೂ. ಆದಾಯ ಸಂಗ್ರಹವಾಗಿದ್ದರೆ, ಈ ವರ್ಷ ಅದೇ ತಿಂಗಳಲ್ಲಿ 3,559.08 ಕೋಟಿ ರೂ. ಆದಾಯ ಲಭಿಸಿದೆ. ಇದರಿಂದ ವರ್ಷಾಂತರ ಹೋಲಿಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಇದಲ್ಲದೆ, ಕಳೆದ ವರ್ಷದ ಹೋಲಿಕೆಯಲ್ಲಿ ಈ ವರ್ಷ 1.59 ಲಕ್ಷ ಬಾಕ್ಸ್ ಐಎಂಎಲ್ (IML) ಹೆಚ್ಚುವರಿಯಾಗಿ ಮಾರಾಟವಾಗಿದೆ. ಐಎಂಎಲ್ ಹಾಗೂ ಬಿಯರ್ ಮಾರಾಟದಿಂದ ಅಬಕಾರಿ ಇಲಾಖೆಗೆ ಹೆಚ್ಚುವರಿಯಾಗಿ 166.74 ಕೋಟಿ ರೂ. ಆದಾಯ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ವರ್ಷದ ಆಚರಣೆ, ಪ್ರವಾಸೋದ್ಯಮ ಚಟುವಟಿಕೆಗಳು ಹಾಗೂ ನಗರಗಳಲ್ಲಿ ನಡೆದ ಸಂಭ್ರಮಾಚರಣೆಗಳು ಮದ್ಯ ಮಾರಾಟ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ ಎನ್ನಲಾಗಿದೆ.

