ಚಿಕ್ಕಮಗಳೂರು: ಹಳೆ ಪ್ರಿಯತಮೆಯ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದ ಕಾರಣಕ್ಕೆ, ಯುವತಿಯ ಸಹೋದರ ಹಾಗೂ ಆಕೆಯ ನಿಶ್ಚಿತಾರ್ಥಗೊಂಡಿದ್ದ ಯುವಕ ಸೇರಿ ಮಾಜಿ ಪ್ರಿಯತಮನನ್ನು ಚಾಕು ಇರಿದು ಹತ್ಯೆ ಮಾಡಿದ ಘಟನೆ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ನಡೆದಿದ್ದು, ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹತ್ಯೆಯಾದ ಯುವಕನನ್ನು ಉಡೇವಾ ಗ್ರಾಮದ ಮಂಜುನಾಥ್ (28) ಎಂದು ಗುರುತಿಸಲಾಗಿದೆ. ಮಂಜುನಾಥ್ ಯುವತಿಯೊಂದಿಗಿನ ಪ್ರೇಮ ಸಂಬಂಧ ಹೊಂದಿದ್ದನು. ಆದರೆ, ಆಕೆಯ ಮನೆಯವರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿ, ವೇಣು ಎಂಬ ಮತ್ತೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯಿಸಿದ್ದರು.
ಇದಾದ ಬಳಿಕ, ಎರಡು ದಿನಗಳ ಹಿಂದೆ ಯುವತಿಯ ಹುಟ್ಟುಹಬ್ಬದ ನಿಮಿತ್ತ ಮಂಜುನಾಥ್ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದನು. ಈ ವಿಚಾರದಿಂದ ಕೆರಳಿದ ಯುವತಿಯ ಸಹೋದರ ಕಿರಣ್ ಹಾಗೂ ನಿಶ್ಚಿತಾರ್ಥಗೊಂಡಿದ್ದ ಯುವಕ ವೇಣು, ಮಂಜುನಾಥ್‌ಗೆ ಕರೆ ಮಾಡಿ ಮಾತನಾಡುವ ನೆಪದಲ್ಲಿ ಅತ್ತಿಗನಾಳು ಗ್ರಾಮಕ್ಕೆ ಕರೆಸಿಕೊಂಡು ಚಾಕು ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ.
ಗಾಯಗೊಂಡ ಮಂಜುನಾಥ್‌ನನ್ನು ತಕ್ಷಣ ತರೀಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್ ಮೃತಪಟ್ಟಿದ್ದಾನೆ.
ಎದೆಮಟ್ಟಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.
ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯ ಸಹೋದರ ಕಿರಣ್ ಹಾಗೂ ನಿಶ್ಚಿತಾರ್ಥಗೊಂಡಿದ್ದ ಯುವಕ ವೇಣುವನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

