ಮೈಸೂರು, ಜ.6: ಜಿಲ್ಲಾ ಪಂಚಾಯಿತಿ ಬಳಿಯಿರುವ ಹಳೆ ಕೋರ್ಟ್ ಕಟ್ಟಡದಲ್ಲಿರುವ ಮೈಸೂರು ನ್ಯಾಯಾಲಯಕ್ಕೆ ಮಂಗಳವಾರ ಬಾಂಬ್ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಕಠಿಣಗೊಳಿಸಲಾಯಿತು. ಮುಂಜಾಗೃತ ಕ್ರಮವಾಗಿ ನ್ಯಾಯಾಲಯದ ಕಲಾಪವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ವಕೀಲರು ಹಾಗೂ ಕಕ್ಷಿದಾರರನ್ನು ಹೊರಗೆ ಕರೆತರುವಂತೆ ಸೂಚಿಸಲಾಯಿತು.
ಘಟನೆಯ ಮಾಹಿತಿ ಪಡೆದ ತಕ್ಷಣವೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಹಾಗೂ ಪೊಲೀಸ್ ತಂಡಗಳು ಭೇಟಿ ನೀಡಿ ಸುದೀರ್ಘ ಪರಿಶೀಲನೆ ನಡೆಸಿವೆ. ನ್ಯಾಯಾಲಯದ ಆವರಣ ಮತ್ತು ಸುತ್ತಮುತ್ತಲ ಪ್ರದೇಶವನ್ನು ಸಂಪೂರ್ಣವಾಗಿ ತಪಾಸಣೆ ಮಾಡಲಾಗಿದ್ದು, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಾಂಬ್ ಬೆದರಿಕೆ ನೀಡಿದವರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ. ಭದ್ರತಾ ದೃಷ್ಟಿಯಿಂದ ನ್ಯಾಯಾಲಯದ ಆವರಣದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

