ಸುತ್ತೂರು ಜಾತ್ರಾ ಮಹೋತ್ಸವ–2026ರ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪರಮಪೂಜ್ಯರ ದಿವ್ಯ ಸಾನಿಧ್ಯ ಹಾಗೂ ಬಂದು–ಬಾಂಧವರ ಸಮ್ಮುಖದಲ್ಲಿ ಒಟ್ಟು 135 ಜೋಡಿಗಳು ತಮ್ಮ ಹೊಸ ಜೀವನಕ್ಕೆ ಕಾಲಿರಿಸಿದರು.
ಶ್ರೀಗಳವರ ಆಶೀರ್ವಾದದಿಂದ 2009ರಿಂದ ನಿರಂತರವಾಗಿ ನಡೆಯುತ್ತಿರುವ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಇದುವರೆಗೆ 3886 ಜೋಡಿಗಳಿಗೆ ದಾಂಪತ್ಯ ಜೀವನದ ದಾರಿ ತೆರೆದಿದೆ. ಈ ಬಾರಿ ನಡೆದ ವಿವಾಹದಲ್ಲಿ ಪರಿಶಿಷ್ಟ ಜಾತಿಯ 84, ಪರಿಶಿಷ್ಟ ಪಂಗಡದ 15, ಹಿಂದುಳಿದ ವರ್ಗದ 21, ಅಂತರಜಾತಿ 11 ಜೋಡಿಗಳು ವಿವಾಹವಾದರು. ಇದಲ್ಲದೆ ವಿಶೇಷ ಚೇತನರ 3 ಜೋಡಿಗಳು, ಮರುಮದುವೆಯ 3 ಜೋಡಿಗಳು ಸಹ ಈ ಮಹೋತ್ಸವದಲ್ಲಿ ಪಾಲ್ಗೊಂಡು ಸಪ್ತಪದಿ ತುಳಿದರು.
ಮೈಸೂರು, ಚಾಮರಾಜನಗರ ಜಿಲ್ಲೆಗಳ ಜೊತೆಗೆ ಮಂಡ್ಯ, ಕಲಬುರಗಿ, ರಾಯಚೂರು, ಬೆಂಗಳೂರು, ರಾಮನಗರ ಜಿಲ್ಲೆಗಳು ಹಾಗೂ ತಮಿಳುನಾಡು ರಾಜ್ಯದಿಂದಲೂ ವಧುವರರು ಭಾಗವಹಿಸಿದ್ದರು. ವರರಿಗೆ ಪಂಚೆ–ಶರ್ಟ್ ಹಾಗೂ ವಲ್ಲಿ, ವಧುಗಳಿಗೆ ಸೀರೆ, ರವಿಕೆ, ಮಾಂಗಲ್ಯ, ಕಾಲುಂಗುರಗಳನ್ನು ನೀಡಲಾಗಿದ್ದು, ಶಾಸ್ತ್ರೋಕ್ತ ವಿಧಿವಿಧಾನಗಳಂತೆ ವಿವಾಹ ನೆರವೇರಿಸಲಾಯಿತು.
ಸಮಾಜಮುಖಿ ಕಾರ್ಯಕ್ರಮಗಳಿಗೆ ಶ್ಲಾಘನೆ
ಸಾಮೂಹಿಕ ವಿವಾಹ ಮಹೋತ್ಸವದ ಅಧ್ಯಕ್ಷತೆ ವಹಿಸಿದ್ದ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ಅತ್ಯಂತ ಉಪಯುಕ್ತವಾಗಿವೆ ಎಂದು ಶ್ಲಾಘಿಸಿದರು.
ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಸುತ್ತೂರು ಶ್ರೀ ಮಠವನ್ನು ಆದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳು ಸ್ಥಾಪಿಸಿದ್ದು, ಧರ್ಮದ ಜೊತೆಗೆ ಶಿಕ್ಷಣ, ವಸತಿ ಮತ್ತು ಸಾಮಾಜಿಕ ಸೇವೆಯನ್ನು ಸಮಾನವಾಗಿ ನೀಡುತ್ತ ಬಂದಿದೆ ಎಂದು ಹೇಳಿದರು. ಸಾಮೂಹಿಕ ವಿವಾಹಗಳ ಮೂಲಕ ಖರ್ಚು ಕಡಿಮೆ ಮಾಡಿ ಎಲ್ಲಾ ಜಾತಿ–ಧರ್ಮದವರಿಗೆ ವಿವಾಹದ ಅವಕಾಶ ಕಲ್ಪಿಸಿರುವುದು ವೈಚಾರಿಕ ಕ್ರಾಂತಿ ಎಂದರು.
ಪುಣ್ಯಕ್ಷೇತ್ರದ ಅರ್ಥ ಮಾನವೀಯ ಸೇವೆ
ಸಮಾರಂಭದಲ್ಲಿ ಶುಭ ಸಂದೇಶ ನೀಡಿದ ತಿರುವನಂತಪುರಂನ ಡಾ. ಕೇಬ್ರಿಯಲ್ ಮಾರ್ ಗ್ರೆಗೋರಿಯಸ್ ಹಾಗೂ ಮೈಸೂರಿನ ಬಿಷಪ್ ಫ್ರಾನ್ಸಿಸ್ ಸೆರಾವ್ ಎಸ್‌ಜೆ ಮಾತನಾಡಿ, ಸುತ್ತೂರು ಕ್ಷೇತ್ರ ಪೂಜೆ–ಪುನಸ್ಕಾರಗಳಿಂದಲ್ಲ, ಬಡವರಿಗೆ ಅನ್ನ, ಬಾಯಾರಿದವರಿಗೆ ನೀರು, ಉಡುಪಿಲ್ಲದವರಿಗೆ ಉಡುಪು ಮತ್ತು ಜೀವನದಲ್ಲಿ ದಾರಿ ಕಾಣದವರಿಗೆ ವಿವಾಹ ಸಂಸ್ಕಾರ ನೀಡುವ ಮೂಲಕ ಪುಣ್ಯಕ್ಷೇತ್ರವಾಗಿದೆ ಎಂದು ಹೇಳಿದರು.
ಧಾರ್ಮಿಕ, ಆರೋಗ್ಯ, ಶೈಕ್ಷಣಿಕ ಹಾಗೂ ಸಮಾಜಸೇವಾ ಕ್ಷೇತ್ರಗಳಲ್ಲಿ ಫಲಾಪೇಕ್ಷೆ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಗಣ್ಯರ ಉಪಸ್ಥಿತಿ
ಸಮಾರಂಭದಲ್ಲಿ ಮಾಜಿ ಸಚಿವರಾದ ಅಲ್ಲಮ ವೀರಭದ್ರಪ್ಪ, ಆರ್.ವಿ. ದೇಶಪಾಂಡೆ, ಶಾಸಕರಾದ ಹಂಪನಗೌಡ ಬಾದರ್ಲಿ, ನಂಜೇಗೌಡ, ಯುಎಸ್‌ಎ ನ ಹಿರಿಯ ನಿರ್ದೇಶಕ ರಾಜಣ್ಣ ಹೆಗ್ಗಡಹಳ್ಳಿ, ಕೋಟೆ ಸರಗೂರಿನ ವೆಂಕಟೇಶ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ಶ್ರೀ ಮಠದ ಸೇವಾ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವ ಅಲ್ಲಮವೀರಭದ್ರಪ್ಪ ಪ್ರತಿಜ್ಞಾವಿಧಿ ಬೋಧನೆ ಮಾಡಿದರು. ನಂಜನಗೂಡಿನ ನೋಂದಣಾಧಿಕಾರಿ ವಿವೇಕ್ ಎಎಸ್‌ಪಿ ಮಲ್ಲಿಕ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.
ನಾಡಿನಾದ್ಯಂತದಿಂದ ಆಗಮಿಸಿದ ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾಗಿದ್ದು, ನಂತರ ರುಚಿಕರ ಭೋಜನವನ್ನು ಸವಿದರು.

