ಬೆಂಗಳೂರು: ನಗರದ ನಮ್ಮ ಮೆಟ್ರೋ (Namma Metro) ಟಿಕೆಟ್ ದರ ಏರಿಕೆ ವಿಚಾರ ಮತ್ತೊಮ್ಮೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಪ್ರತಿವರ್ಷ ಫೆಬ್ರವರಿಯಲ್ಲಿ 5% ಸ್ವಯಂಚಾಲಿತ ದರ ಏರಿಕೆ ಮಾಡಲು ಬಿಎಂಆರ್‌ಸಿಎಲ್ (BMRCL) ಸಿದ್ಧತೆ ಮಾಡಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕಳೆದ ಫೆಬ್ರವರಿ 9ರಂದು ಬಿಎಂಆರ್‌ಸಿಎಲ್ ಅಧಿಕಾರಿಗಳು 105.5%ರಷ್ಟು ಏಕಾಏಕಿ ದರ ಏರಿಕೆ ಮಾಡಿದ್ದನ್ನು ವಿರೋಧಿಸಿ ಪ್ರಯಾಣಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಆ ನಂತರ ದರವನ್ನು 71.5%ಕ್ಕೆ ಇಳಿಸಲಾಗಿತ್ತು. ಈ ಗೊಂದಲದ ನಡುವೆಯೇ ಇದೀಗ ವಾರ್ಷಿಕ ಸ್ವಯಂಚಾಲಿತ ದರ ಏರಿಕೆ ಮಾಡಲು ಬಿಎಂಆರ್‌ಸಿಎಲ್ ಮುಂದಾಗಿರುವುದು ಮತ್ತೆ ಟೀಕೆಗೆ ಗುರಿಯಾಗಿದೆ.
ಬೆಂಗಳೂರು ಮೆಟ್ರೋಗೆ ದರ ನಿಗದಿ ಸಮಿತಿಯನ್ನು ಪುನರ್ ರಚಿಸಬೇಕು ಹಾಗೂ ಅಧಿಕಾರಿಗಳ ತಪ್ಪು ಲೆಕ್ಕಾಚಾರ ಸರಿಪಡಿಸುವವರೆಗೆ ವಾರ್ಷಿಕ ದರ ಏರಿಕೆಯನ್ನು ತಡೆಹಿಡಿಯಬೇಕು ಎಂದು ತೇಜಸ್ವಿ ಸೂರ್ಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಕಳುಹಿಸಲಾಗಿದೆ.
ಇನ್ನೊಂದೆಡೆ, ಮೆಟ್ರೋ ಟಿಕೆಟ್ ದರ ಏರಿಕೆ ವಿರೋಧಿಸಿ ‘ಸೇವ್ ಬೆಂಗಳೂರು ಕಮಿಟಿ’ ಹಾಗೂ ‘ಬೆಂಗಳೂರು ಮೆಟ್ರೋ ಪ್ರಯಾಣಿಕರ ವೇದಿಕೆ’ ಬಿಎಂಆರ್‌ಸಿಎಲ್ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿವೆ. ಯಾವುದೇ ಕಾರಣಕ್ಕೂ ಮುಂದಿನ ತಿಂಗಳಿಂದ ದರ ಏರಿಕೆ ಮಾಡಬಾರದು ಎಂದು ಸಂಘಟನೆಗಳು ಒತ್ತಾಯಿಸಿವೆ.

