ಬೆಂಗಳೂರು: CL-7 ಲೈಸೆನ್ಸ್ ಮಾಡಿಸಿಕೊಡುವುದಾಗಿ ಹೇಳಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಅಬಕಾರಿ ಇಲಾಖೆಯ ಡೆಪ್ಯೂಟಿ ಕಮಿಷನರ್ (ಡಿಸಿ), ಎಸ್ಪಿ ಹಾಗೂ ಕಾನ್ಸ್ಟೇಬಲ್ ಸೇರಿ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಕೋರ್ಟ್ ಆದೇಶಿಸಿದೆ. ಬಂಧಿತರನ್ನು ಅಬಕಾರಿ ಡಿಸಿ ಜಗದೀಶ್, ಎಸ್ಪಿ ತಮ್ಮಣ್ಣ ಹಾಗೂ ಕಾನ್ಸ್ಟೇಬಲ್ ಲಕ್ಕಪ್ಪ ಗಣಿ ಎಂದು ಗುರುತಿಸಲಾಗಿದೆ.
ಲೋಕಾಯುಕ್ತ ಪೊಲೀಸರು ಮೂವರನ್ನು ತಡರಾತ್ರಿವರೆಗೆ ವಿಚಾರಣೆ ನಡೆಸಿ, ಲಂಚದ ಹಣ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ನಂತರ ಎಲ್ಲಾ ದಾಖಲೆಗಳ ಸಮೇತ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುವಂತೆ ಆದೇಶಿಸಿದೆ.
ಪ್ರಾಥಮಿಕ ತನಿಖೆಯಲ್ಲಿ, CL-7 ಲೈಸೆನ್ಸ್ ಮಂಜೂರಾತಿಗೆ ಅನುಕೂಲ ಮಾಡಿಕೊಡುವ ನೆಪದಲ್ಲಿ ಆರೋಪಿಗಳು ಲಂಚಕ್ಕೆ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ಕುರಿತಾಗಿ ಮುಂದಿನ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಮುಂದುವರೆಸಿದ್ದಾರೆ.
ಏನಿದು CL-7 ಲೈಸೆನ್ಸ್?
CL-7 ಲೈಸೆನ್ಸ್ ಎಂದರೆ ಕರ್ನಾಟಕ ರಾಜ್ಯದಲ್ಲಿ ಹೋಟೆಲ್‌ಗಳು ಮತ್ತು ವಸತಿ ಗೃಹಗಳಿಗೆ ಅಬಕಾರಿ ಇಲಾಖೆಯಿಂದ ನೀಡಲಾಗುವ ಮದ್ಯ ಮಾರಾಟ ಪರವಾನಗಿ. ಈ ಲೈಸೆನ್ಸ್ ಹೊಂದಿರುವ ಹೋಟೆಲ್‌ಗಳಿಗೆ ಮಾತ್ರ ಮದ್ಯ ಮಾರಾಟ ಮಾಡಲು ಕಾನೂನಾತ್ಮಕ ಅನುಮತಿ ಇರುತ್ತದೆ.

