ತಿರುವನಂತಪುರಂ :ಕೇರಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣದ ಸಮಗ್ರ ತನಿಖೆ ನಡೆಸಲಾಗುವುದು. ಇದು ಮೋದಿಯ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ಚುನಾವಣಾ ದಿನಾಂಕ ಪ್ರಕಟವಾಗುವ ಮೊದಲೇ ಕೇರಳದಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಇಳಿದಿರುವ ಪ್ರಧಾನಿ ಮೋದಿ, ಇಂದು ತಿರುವನಂತಪುರದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್‌ಡಿಎಫ್ ಮತ್ತು ಯುಡಿಎಫ್ ಮೈತ್ರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ರಾಜ್ಯದ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂದು ಮೋದಿ ಹೇಳಿದರು. ಕೇರಳದಲ್ಲಿ ಬದಲಾವಣೆ ಅನಿವಾರ್ಯವಾಗಿದ್ದು, ಎಡಪಂಥೀಯ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ರಾಜ್ಯವನ್ನು ಭ್ರಷ್ಟಾಚಾರ ಹಾಗೂ ತುಷ್ಟೀಕರಣದ ರಾಜಕೀಯದ ಕಡೆಗೆ ತಳ್ಳಿವೆ ಎಂದು ಆರೋಪಿಸಿದರು.
ಎಲ್‌ಡಿಎಫ್ ಮತ್ತು ಯುಡಿಎಫ್ ಧ್ವಜಗಳು ಹಾಗೂ ಚಿಹ್ನೆಗಳು ವಿಭಿನ್ನವಾಗಿದ್ದರೂ, ಅವರ ರಾಜಕೀಯ ಹಾಗೂ ಕಾರ್ಯಸೂಚಿಗಳು ಬಹುತೇಕ ಒಂದೇ ಆಗಿವೆ ಎಂದು ಟೀಕಿಸಿದರು. ದಶಕಗಳ ಕಾಲ ಈ ಎರಡೂ ಮೈತ್ರಿಗಳು ತಿರುವನಂತಪುರವನ್ನು ನಿರ್ಲಕ್ಷಿಸಿ, ನಗರವನ್ನು ಮೂಲಭೂತ ಸೌಕರ್ಯಗಳಿಂದ ವಂಚಿತಗೊಳಿಸಿದ್ದವು. ಜನರ ಅಗತ್ಯಗಳನ್ನು ಪೂರೈಸುವಲ್ಲಿ ಎಡಪಂಥೀಯರು ಮತ್ತು ಕಾಂಗ್ರೆಸ್ ನಿರಂತರವಾಗಿ ವಿಫಲವಾಗಿವೆ ಎಂದು ಹೇಳಿದರು. ಆದರೆ ಈಗ ನಮ್ಮ ತಂಡ ಅಭಿವೃದ್ಧಿ ಹೊಂದಿದ ತಿರುವನಂತಪುರಂ ನಿರ್ಮಾಣದತ್ತ ಕೆಲಸ ಆರಂಭಿಸಿದೆ ಎಂದು ಹೇಳಿದರು.
ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಐತಿಹಾಸಿಕವಾಗಿದ್ದು, ಇದು ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಹೊಂದಿದ ಕೇರಳದ ಸಂಕಲ್ಪದ ಗೆಲುವು ಎಂದು ಮೋದಿ ಬಣ್ಣಿಸಿದರು. ಈ ಜಯವು ಕೇರಳವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಬದ್ಧತೆಯ ವಿಜಯವಾಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಕೇರಳದಲ್ಲಿ ಬಿಜೆಪಿಯ ಆರಂಭವನ್ನು ಗುಜರಾತ್‌ನಲ್ಲಿನ ಪಕ್ಷದ ಆರಂಭಿಕ ಪ್ರಯಾಣದೊಂದಿಗೆ ಹೋಲಿಕೆ ಮಾಡಿದರು. 1987ರ ಮೊದಲು ಬಿಜೆಪಿ ಗುಜರಾತ್‌ನಲ್ಲಿ ಸಣ್ಣ ಪಕ್ಷವಾಗಿದ್ದು, ಅದೇ ವರ್ಷ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಮೊದಲ ಬಾರಿಗೆ ಜಯ ಸಾಧಿಸಿತು. ಗುಜರಾತ್‌ನಲ್ಲಿ ಒಂದು ನಗರದಿಂದ ಆರಂಭವಾದಂತೆ, ಕೇರಳದಲ್ಲಿಯೂ ಬಿಜೆಪಿಯ ಹೊಸ ರಾಜಕೀಯ ಪ್ರಯಾಣ ಒಂದು ನಗರದಿಂದ ಆರಂಭವಾಗುತ್ತಿದೆ ಎಂದು ಹೇಳಿದರು.
ತಿರುವನಂತಪುರಂ ಇಡೀ ದೇಶಕ್ಕೆ ಮಾದರಿ ನಗರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ, ಈ ನಗರವನ್ನು ಭಾರತದ ಅತ್ಯುತ್ತಮ ನಗರಗಳಲ್ಲಿ ಒಂದನ್ನಾಗಿ ರೂಪಿಸಲು ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಭರವಸೆ ನೀಡಿದರು.
ಇದಕ್ಕೂ ಮೊದಲು, ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ನಡುವೆ ಪ್ರಾದೇಶಿಕ ರೈಲು ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ ಮೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸೇರಿದಂತೆ ನಾಲ್ಕು ಹೊಸ ರೈಲು ಸೇವೆಗಳಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದರು. ನಾಗರಕೋಯಿಲ್–ಮಂಗಳೂರು, ತಿರುವನಂತಪುರಂ–ತಾಂಬರಂ ಹಾಗೂ ತಿರುವನಂತಪುರಂ–ಚರ್ಲಪಲ್ಲಿ ಮಾರ್ಗಗಳಿಗೆ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಚಾಲನೆ ನೀಡಲಾಯಿತು.
ನಗರ ಜೀವನೋಪಾಯವನ್ನು ಬಲಪಡಿಸುವ ಪ್ರಯತ್ನಗಳ ಭಾಗವಾಗಿ, ಪ್ರಧಾನಿ ಮೋದಿ ಒಂದು ಲಕ್ಷ ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಿದರು. ವಿಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ, ತಿರುವನಂತಪುರಂನಲ್ಲಿ CSIR–NIIST ನಾವೀನ್ಯತೆ, ತಂತ್ರಜ್ಞಾನ ಮತ್ತು ಉದ್ಯಮಶೀಲತಾ ಕೇಂದ್ರಕ್ಕೆ ಅಡಿಪಾಯ ಕೂಡ ಹಾಕಿದರು.

