ಬೆಂಗಳೂರು, ಜನವರಿ 23: ಸಾಲು ಸಾಲು ರಜೆಗಳ ಹಿನ್ನೆಲೆ ಖಾಸಗಿ ಬಸ್‌ಗಳ ಪ್ರಯಾಣ ದರಗಳು ಗಣನೀಯವಾಗಿ ಏರಿಕೆಯಾಗಿವೆ. ನಾಳೆ ನಾಲ್ಕನೇ ಶನಿವಾರ, ಭಾನುವಾರ ಹಾಗೂ ಸೋಮವಾರ ಗಣರಾಜ್ಯೋತ್ಸವದ ಕಾರಣ ಸತತ ಮೂರು ದಿನಗಳ ರಜೆ ಇರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಊರುಗಳಿಗೆ ಪ್ರಯಾಣಿಸುತ್ತಿದ್ದಾರೆ.
ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡಿರುವ ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ದುಪ್ಪಟ್ಟುಗೊಳಿಸಿರುವ ಆರೋಪ ಕೇಳಿಬರುತ್ತಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಹಿಂದಿನ ದರ 1,473 ರೂ ಇದ್ದು, ಇದೀಗ ಅದು ಸುಮಾರು 5,000 ರೂಗೆ ಏರಿಕೆಯಾಗಿದೆ. ಬೆಂಗಳೂರು–ಕಾರವಾರ ಮಾರ್ಗದಲ್ಲಿ ಪ್ರಸ್ತುತ 1,790 ರೂಗಿಂತಲೂ ಅಧಿಕ ದರ ವಸೂಲಿಸಲಾಗುತ್ತಿದೆ.
ಇನ್ನು ಬೆಂಗಳೂರಿನಿಂದ ಕಲಬುರಗಿಗೆ ಪ್ರಯಾಣ ದರ 1,299 ರೂಗಳಿಂದ 2,200 ರೂಗೆ ಹೆಚ್ಚಾಗಿದೆ. ಬೆಂಗಳೂರು–ಶಿವಮೊಗ್ಗ ಮಾರ್ಗದಲ್ಲಿ 599 ರೂ ಇದ್ದ ದರ ಇದೀಗ ಸುಮಾರು 3,000 ರೂ ತಲುಪಿದೆ. ಅದೇ ರೀತಿ, ಬೆಂಗಳೂರು–ಮಂಗಳೂರು ಮಾರ್ಗದಲ್ಲಿ 909 ರೂ ಇದ್ದ ದರ 2,299 ರೂಗೆ ಏರಿಕೆಯಾಗಿದೆ.
ಸತತ ರಜೆಗಳ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವ ಪ್ರಯಾಣಿಕರು ಹೆಚ್ಚುವರಿ ದರ ಪಾವತಿಸಿ ಪ್ರಯಾಣಿಸಲು ಅನಿವಾರ್ಯ ಸ್ಥಿತಿಗೆ ತಲುಪಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.

