ಧರ್ಮಸ್ಥಳ, ಜನವರಿ 23: ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿ ಗುರುತಿಸಿಕೊಂಡು, ‘ಉಗ್ರಂ’ ಸಿನಿಮಾದ ಮೂಲಕ ಅಪಾರ ಜನಪ್ರಿಯತೆ ಪಡೆದ ನಟ ಉಗ್ರಂ ಮಂಜು ಇಂದು (ಜನವರಿ 23) ಸಾಯಿ ಸಂಧ್ಯಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ ನೆರವೇರಿತು.
ಬಿಗ್ ಬಾಸ್ ಮುಗಿದ ಬಳಿಕ ಮದುವೆಗೆ ಗಟ್ಟಿಯಾದ ನಿರ್ಧಾರ ಕೈಗೊಂಡಿದ್ದ ಮಂಜುಗೆ ತಂದೆ-ತಾಯಿಯವರಿಂದಲೂ ಒತ್ತಡವಿತ್ತು. ಇದೇ ವಿಚಾರವನ್ನು ಅವರು ಬಿಗ್ ಬಾಸ್ ವೇದಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಎದುರು ಹಂಚಿಕೊಂಡಿದ್ದರು. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವುದಕ್ಕೂ ಮುನ್ನ ನೀಡಿದ್ದ ಮಾತಿನಂತೆ ಸಾಯಿ ಸಂಧ್ಯಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಇತ್ತೀಚೆಗೆ ಮುಕ್ತಾಯಗೊಂಡ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ವಿಶೇಷ ಅತಿಥಿಯಾಗಿ ಎಂಟ್ರಿ ಕೊಟ್ಟು ಗಮನ ಸೆಳೆದಿದ್ದ ಮಂಜು, ಅಲ್ಲಿಯೇ ಬ್ಯಾಚುಲರ್ ಪಾರ್ಟಿಯನ್ನು ಆಚರಿಸಿಕೊಂಡಿದ್ದರು. ಕಳೆದ ಕೆಲವು ದಿನಗಳಿಂದ ಮದುವೆ ಸಂಭ್ರಮಗಳು ಜೋರಾಗಿ ನಡೆಯುತ್ತಿದ್ದು, ಮೂಲತಃ ಕೋಲಾರದವರಾದ ಉಗ್ರಂ ಮಂಜು ಅವರ ಮನೆಯಲ್ಲಿ ಅರಿಶಿಣ ಶಾಸ್ತ್ರವೂ ನೆರವೇರಿತ್ತು. ಅದರ ಫೋಟೊ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಧರ್ಮಸ್ಥಳದಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಬಿಗ್ ಬಾಸ್‌ನ ಸಹ ಸ್ಪರ್ಧಿ ಮೋಕ್ಷಿತಾ ಪೈ, ಬಿಗ್ ಬಾಸ್ ಕನ್ನಡ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್ ಸೇರಿದಂತೆ ಹಲವರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದರು.
ಸಾಯಿ ಸಂಧ್ಯಾ ಮತ್ತು ಉಗ್ರಂ ಮಂಜು ಅವರ ಪರಿಚಯ ಹಾಗೂ ಪ್ರಪೋಸಲ್ ಕುರಿತು ಮಂಜು ಬಿಗ್ ಬಾಸ್ ಸೀಸನ್ 12ರಲ್ಲಿ ಹಂಚಿಕೊಂಡಿದ್ದರು. ಸ್ನೇಹಿತರೊಂದಿಗೆ ಲಾಂಗ್ ಡ್ರೈವ್ ವೇಳೆ ಮಂಗಳೂರಿನ ಸಮೀಪದ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುವಾಗ ಮದುವೆಗೆ ಪ್ರಪೋಸ್ ಮಾಡಿದ್ದಾಗಿ ಅವರು ತಿಳಿಸಿದ್ದರು.
ಸಾಯಿ ಸಂಧ್ಯಾ ಅವರು ವೃತ್ತಿಪರವಾಗಿ ಸ್ಪರ್ಶ್ ಆಸ್ಪತ್ರೆಯಲ್ಲಿ ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮದುವೆಯ ನಂತರ ಉಗ್ರಂ ಮಂಜು ಹಾಗೂ ಸಾಯಿ ಸಂಧ್ಯಾ ಅವರ ವಿವಾಹದ ವಿಡಿಯೋ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.
ಉಗ್ರಂ ಮಂಜು ಬಿಗ್ ಬಾಸ್ ಮನೆಗೆ ಪ್ರವೇಶಿಸುವುದಕ್ಕೂ ಮುನ್ನ ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿಸಿದ್ದರು. ಬಿಗ್ ಬಾಸ್ ನಂತರವೂ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ಅವರು, ಮದುವೆ ಸಂಭ್ರಮ ಮುಗಿದ ಬಳಿಕ ಇನ್ನಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

