ಬೆಂಗಳೂರು: ಸಾಲು ಸಾಲು ರಜೆ ಹಿನ್ನೆಲೆ ಖಾಸಗಿ ಬಸ್‌ಗಳ ದರದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ. ಜನವರಿ 24ರಂದು ನಾಲ್ಕನೇ ಶನಿವಾರ, ಜನವರಿ 25ರಂದು ಭಾನುವಾರ ಹಾಗೂ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಸತತ ಮೂರು ದಿನಗಳ ರಜೆ ಇರುವುದರಿಂದ, ಶುಕ್ರವಾರ ಸಂಜೆದಿಂದಲೇ ಬೆಂಗಳೂರಿನ ಜನರು ತಮ್ಮ ತಮ್ಮ ಊರುಗಳತ್ತ ಪ್ರಯಾಣ ಆರಂಭಿಸಿದ್ದಾರೆ. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಖಾಸಗಿ ಬಸ್‌ಗಳು ಟಿಕೆಟ್ ದರವನ್ನು ಗಣನೀಯವಾಗಿ ಹೆಚ್ಚಿಸಿವೆ.
ಸಾಮಾನ್ಯ ದಿನಗಳಲ್ಲಿ ₹500ರಿಂದ ₹800–₹1000ವರೆಗೆ ಇರುವ ಸ್ಲೀಪರ್ ಬಸ್‌ಗಳ ದರ ಇದೀಗ ₹2000 ಗಡಿ ದಾಟಿದೆ. ಪರಿಣಾಮ ರಜೆ ಇದ್ದರೂ ತಮ್ಮ ಊರಿಗೆ ತೆರಳಲು ಪ್ರಯಾಣಿಕರು ಹೆಚ್ಚಿನ ಹಣ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವರು ಪ್ರಯಾಣವನ್ನೇ ಮುಂದೂಡುತ್ತಿದ್ದಾರೆ.
ಟಿಕೆಟ್ ದರ ಏರಿಕೆಯ ವಿವರ ಇಲ್ಲಿದೆ:
ಬೆಂಗಳೂರು – ಮಂಗಳೂರು:
ಸಾಮಾನ್ಯ ದಿನ ₹500–₹800 | ಇಂದಿನ ದಿನ ₹1400–₹2000
ಬೆಂಗಳೂರು – ಉಡುಪಿ:
ಸಾಮಾನ್ಯ ದಿನ ₹600–₹750 | ಇಂದಿನ ದಿನ ₹1650–₹1699
ಬೆಂಗಳೂರು – ಚಿಕ್ಕಮಗಳೂರು:
ಸಾಮಾನ್ಯ ದಿನ ₹550–₹600 | ಇಂದಿನ ದಿನ ₹1500–₹1600
ಬೆಂಗಳೂರು – ಹಾಸನ:
ಸಾಮಾನ್ಯ ದಿನ ₹650–₹850 | ಇಂದಿನ ದಿನ ₹1000–₹1200
ಬೆಂಗಳೂರು – ಬೆಳಗಾವಿ:
ಸಾಮಾನ್ಯ ದಿನ ₹1200–₹1300 | ಇಂದಿನ ದಿನ ₹2500–₹3000
ಇನ್ನೊಂದೆಡೆ, ಜನವರಿ 24, 25 ಮತ್ತು 26ರಂದು ಸಾಲು ಸಾಲು ರಜೆ ಇರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯದ ವಿವಿಧ ಮಾರ್ಗಗಳಿಗೆ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳನ್ನು ಸಂಚರಿಸುವಂತೆ ವ್ಯವಸ್ಥೆ ಮಾಡಿದೆ. ಇದರಿಂದ ಸಾರ್ವಜನಿಕ ಸಾರಿಗೆಯ ಮೂಲಕ ಪ್ರಯಾಣಿಸುವವರಿಗೆ ಸ್ವಲ್ಪ ಮಟ್ಟಿನ ರಿಲೀಫ್ ದೊರೆಯಲಿದೆ.

