ಬೆಂಗಳೂರು: ಅದ್ದೂರಿಯಾಗಿ ತೆರೆಕಂಡಿರುವ ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ ಲಾರ್ಡ್’ ಚಿತ್ರ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಬಾಕ್ಸ್‌ಆಫೀಸ್‌ನಲ್ಲಿ ಬ್ಲಾಕ್‌ಬಾಸ್ಟರ್ ಓಪನಿಂಗ್ ದಾಖಲಿಸಿದೆ. 1980ರ ದಶಕದ ಸಾಮಾಜಿಕ ಹಿನ್ನೆಲೆಯನ್ನು ಆಧಾರವಾಗಿಸಿಕೊಂಡ ಈ ಚಿತ್ರ, ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ.
‘ಕಾಟೇರ’ ಸಿನಿಮಾದ ಕಥೆ ನೀಡಿದ್ದ ಜಡೇಶ್ ನಿರ್ದೇಶನದ ಈ ಚಿತ್ರದಲ್ಲಿ ಪಾಳೇಗಾರಿಕೆ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಧ್ವನಿ ಎತ್ತಲಾಗಿದೆ. ಆಳಿದವರ ಕಥೆಯಲ್ಲ, ಅಳಿದು ಉಳಿದವರ ಬದುಕಿನ ಕಥೆಯನ್ನು ಹೇಳುವ ಮೂಲಕ ‘ಲ್ಯಾಂಡ್ ಲಾರ್ಡ್’ ವಿಭಿನ್ನ ಆಯಾಮದಲ್ಲಿ ಮೂಡಿಬಂದಿದೆ.
ರಾಮದುರ್ಗ ಎಂಬ ಹಳ್ಳಿಯಲ್ಲಿ ನಡೆಯುವ ಕಥೆ, ಸಂವಿಧಾನದ ಆಶಯಗಳನ್ನು ಪ್ರತಿಯೊಂದು ಹಳ್ಳಿಗೂ ತಲುಪಿಸಬೇಕೆಂಬ ಸಂದೇಶವನ್ನು ಸಾರುತ್ತದೆ. ಈ ಕಾರಣದಿಂದಲೇ ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳು “ಲ್ಯಾಂಡ್ ಲಾರ್ಡ್‌ಗೆ ಜೈ.. ಜೈ..” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇದೇ ಚಿತ್ರದ ಮತ್ತೊಂದು ವಿಶೇಷ ಅಂಶವೆಂದರೆ, ದುನಿಯಾ ವಿಜಯ್ ಅವರ ಪುತ್ರಿ ರಿತನ್ಯ ತಮ್ಮ ಮೊದಲ ಸಿನಿಮಾದಲ್ಲೇ ಗಮನಸೆಳೆದ ಅಭಿನಯ. ಒಟ್ಟಾರೆ, ಸಾಮಾಜಿಕ ಸಂದೇಶದೊಂದಿಗೆ ಮನರಂಜನೆ ನೀಡುವ ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

