ಬೆಂಗಳೂರು: ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ವಾರ್ಷಿಕ ಸಮಾವೇಶವು ವೈಮಾನಿಕ–ಅಂತರಿಕ್ಷ, ಆಹಾರ ಸಂಸ್ಕರಣೆ, ಡೇಟಾ ಸೆಂಟರ್, ಡಿಜಿಟಲ್ ಮೂಲಸೌಕರ್ಯ, ಶುದ್ಧ ಇಂಧನ, ಅತ್ಯಾಧುನಿಕ ತಯಾರಿಕೆ ಸೇರಿದಂತೆ ಹಲವು ವಲಯಗಳಲ್ಲಿ ಕರ್ನಾಟಕಕ್ಕೆ ಭಾರೀ ಮುನ್ನಡೆ ನೀಡಿದೆ. ಹೂಡಿಕೆ, ವಿಸ್ತರಣೆ ಹಾಗೂ ಪಾಲುದಾರಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಒಟ್ಟು ₹13,070 ಕೋಟಿ ಹೂಡಿಕೆ ವಾಗ್ದಾನಕ್ಕೆ ಅಧಿಕೃತ ಮುದ್ರೆ ದೊರೆತಿದೆ.
ಕೃತಕ ಬುದ್ಧಿಮತ್ತೆ, ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಸ್ಥಾಪನೆ, ಸಂಶೋಧನೆ ಮತ್ತು ಸುಸ್ಥಿರ ನಗರಾಭಿವೃದ್ಧಿ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ದೇಶದ ಪ್ರಮುಖ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸತತ ಐದು ದಿನಗಳ ಕಾಲ 45ಕ್ಕೂ ಹೆಚ್ಚು ಸಭೆ–ಸಮಾಲೋಚನೆಗಳು ಫಲ ನೀಡಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ದಾವೋಸ್‌ನಿಂದ ಸ್ವದೇಶಕ್ಕೆ ಮರಳಿದ ಬಳಿಕ ಮಾತನಾಡಿದ ಅವರು, ಉದ್ಯಮ ದಿಗ್ಗಜರೊಂದಿಗೆ ನಡೆಸಿದ ಸಂವಾದಗಳು ಹೊಸ ಬಂಡವಾಳ ಹೂಡಿಕೆಗಳಿಗೆ ಗಟ್ಟಿಯಾದ ಬುನಾದಿ ಹಾಕಿವೆ. ಜಾಗತಿಕ ವಾಣಿಜ್ಯ–ಕೈಗಾರಿಕಾ ಪರಿವರ್ತನೆಯ ಮುಂದಿನ ಹಂತದಲ್ಲಿ ಕರ್ನಾಟಕ ತನ್ನ ಸ್ಪರ್ಧಾತ್ಮಕ ಸ್ಥಾನವನ್ನು ಬಲಪಡಿಸಿಕೊಳ್ಳಲು ಇದು ನೆರವಾಗಲಿದೆ ಎಂದು ಹೇಳಿದರು. ಉದ್ಯಮ ಸ್ನೇಹಿ ನೀತಿಗಳು ಹಾಗೂ ಪರಿಣತ ಮಾನವ ಸಂಪನ್ಮೂಲ ಲಭ್ಯತೆಯನ್ನು ಜಾಗತಿಕ ಉದ್ಯಮಿಗಳು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ ಎಂದು ಅವರು ತಿಳಿಸಿದರು.
ಪ್ರಮುಖ ಹೂಡಿಕೆ ಘೋಷಣೆಗಳು:
ಮರುಬಳಕೆ ಇಂಧನ ವಲಯದ ಆರ್.ಪಿ. ಸಂಜೀವ್ ಗೊಯೆಂಕಾ ಉದ್ಯಮ ಸಮೂಹವು ಮುಂದಿನ ಮೂರು ವರ್ಷಗಳಲ್ಲಿ ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ₹10,500 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಇದರಿಂದ ಉತ್ತರ ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ವೇಗ ಸಿಗಲಿದೆ. ಜಾಗತಿಕ ಮದ್ಯ ತಯಾರಿಕಾ ಕಂಪನಿ ಕಾರ್ಲ್ಸ್‌ಬರ್ಗ್ ಗ್ರೂಪ್ ನಂಜನಗೂಡಿನಲ್ಲಿ ₹350 ಕೋಟಿ ವೆಚ್ಚದ ಬಾಟ್ಲಿಂಗ್ ಘಟಕ ಸ್ಥಾಪಿಸುವ ಬದ್ಧತೆಯನ್ನು ಪುನರುಚ್ಚರಿಸಿದೆ.
ಶ್ನೈಡರ್ ಎಲೆಕ್ಟ್ರಿಕ್ ಐಟಿ ವಹಿವಾಟು ಸೇರಿದಂತೆ ₹1,520 ಕೋಟಿ ಹೂಡಿಕೆಗೆ ಮುಂದಾಗಿದ್ದು, ಐನಾಕ್ಸ್ ಜಿಎಫ್‌ಎಲ್ ಕುಷ್ಟಗಿಯಲ್ಲಿ ಪವನ ವಿದ್ಯುತ್ ಟರ್ಬೈನ್ ಬ್ಲೇಡ್ ತಯಾರಿಕೆಯನ್ನು ಆರಂಭಿಸಿದೆ. ಪವನ ವಿದ್ಯುತ್ ಗೋಪುರಗಳು ಮತ್ತು ಸೌರ ಫಲಕ ತಯಾರಿಕೆಗೆ ₹400 ಕೋಟಿ ವೆಚ್ಚ ಮಾಡಲಿದೆ. ಬೆಲ್‌ರೈಸ್ ಇಂಡಸ್ಟ್ರೀಸ್ ಮೈಸೂರು ಘಟಕ ವಿಸ್ತರಣೆಗೆ ₹300 ಕೋಟಿ ಹೂಡಿಕೆ ಮಾಡುತ್ತಿದೆ.
ಡಿಜಿಟಲ್ ಮತ್ತು ಆಹಾರ ಸಂಸ್ಕರಣೆ ಕ್ಷೇತ್ರಕ್ಕೆ ಒತ್ತು:
ಸಿಂಗಪುರ ಮೂಲದ ಕಂಪನಿಗಳನ್ನು ಆಕರ್ಷಿಸಲು ‘ಸಿಂಗಪುರ ಪಾರ್ಕ್’ ಸ್ಥಾಪನೆ ಕುರಿತು ಸಿಂಗಪುರ ಆರ್ಥಿಕ ಅಭಿವೃದ್ಧಿ ಮಂಡಳಿಯೊಂದಿಗೆ ಚರ್ಚೆ ನಡೆದಿದೆ. ಆಹಾರ ಸಂಸ್ಕರಣೆ ವಲಯದಲ್ಲಿ ಕೋಕಾ ಕೋಲಾ ಹೂಡಿಕೆ ಮಾಡುವ ₹25,760 ಕೋಟಿ ಬಂಡವಾಳದಲ್ಲಿನ ಗಮನಾರ್ಹ ಮೊತ್ತವನ್ನು ರಾಜ್ಯಕ್ಕೆ ತರಲು ಪ್ರಯತ್ನ ನಡೆದಿದೆ.
ಈಗಾಗಲೇ ರಾಜ್ಯದಲ್ಲಿ ಸುಮಾರು ₹13,000 ಕೋಟಿ ಹೂಡಿಕೆ ಮಾಡಿರುವ ಭಾರ್ತಿ ಎಂಟರ್‌ಪ್ರೈಸಸ್ ಹೊಸ ಡೇಟಾ ಸೆಂಟರ್ ಸ್ಥಾಪನೆಗೆ ಆಸಕ್ತಿ ತೋರಿಸಿದೆ. ಭಾರತ್ ಫೋರ್ಜ್, ಮಿಸ್ಟ್ರಾಲ್ ಎಐ (ಫ್ರಾನ್ಸ್), ಫಿಲಿಪ್ ಮಾರಿಸ್ (ಅಮೆರಿಕ) ಸೇರಿದಂತೆ ಹಲವು ಕಂಪನಿಗಳು ಹೂಡಿಕೆ ಹಾಗೂ ಸಂಶೋಧನೆಗೆ ಒಲವು ವ್ಯಕ್ತಪಡಿಸಿವೆ.
ಕ್ವಿನ್ ಸಿಟಿಗೆ ಜಾಗತಿಕ ಗಮನ:
ದಾಬಸ್‌ಪೇಟೆ–ದೊಡ್ಡಬಳ್ಳಾಪುರ ಮಧ್ಯೆ ನಿರ್ಮಾಣವಾಗುತ್ತಿರುವ ‘ಕ್ವಿನ್ ಸಿಟಿ’ ಯೋಜನೆಗೆ ಲಂಡನ್‌ನ ಇಂಪೀರಿಯಲ್ ಕಾಲೇಜ್ ಸಂಶೋಧನಾ–ಅಭಿವೃದ್ಧಿ ಕೇಂದ್ರ ಸ್ಥಾಪಿಸುವ ಆಸಕ್ತಿ ತೋರಿದೆ. ಸೈಬರ್ ಸುರಕ್ಷತಾ ದೈತ್ಯ ಕ್ಲೌಡ್‌ಫ್ಲೇರ್ ಕೂಡ ಯೋಜನೆಯ ಭಾಗವಾಗಲು ಮುಂದಾಗಿದೆ.
ಅಮೆರಿಕದ ವೊಯೆಜರ್ ಟೆಕ್ನಾಲಜೀಸ್, ವಾಸ್ಟ್ ಸ್ಪೇಸ್, ಯುಎಇ ಮೂಲದ ಕ್ರೆಸೆಂಟ್ ಎಂಟರ್‌ಪ್ರೈಸಿಸ್ ಸೇರಿದಂತೆ ಹಲವು ಜಾಗತಿಕ ಕಂಪನಿಗಳು ರಾಜ್ಯ ಸರ್ಕಾರದೊಂದಿಗೆ ಪಾಲುದಾರಿಕೆಗೆ ಆಸಕ್ತಿ ವ್ಯಕ್ತಪಡಿಸಿವೆ. ಸ್ವಿಸ್ ಕಂಪನಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಎಂಒಯುಗೂ ಸಹಿ ಹಾಕಲಾಗಿದೆ.
ದ್ವಿಪಕ್ಷೀಯ ವಾಣಿಜ್ಯ ಬಾಂಧವ್ಯ ವೃದ್ಧಿ ಉದ್ದೇಶದಿಂದ ಸಚಿವರು ದೇಶ–ವಿದೇಶಗಳ ಕಾರ್ಪೊರೇಟ್ ದಿಗ್ಗಜರು, ಹೂಡಿಕೆದಾರರು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಮತ್ತು ಡಬ್ಲ್ಯುಇಎಫ್ ಉನ್ನತಾಧಿಕಾರಿಗಳೊಂದಿಗೆ ಫಲಪ್ರದ ಚರ್ಚೆಗಳಲ್ಲಿ ಭಾಗವಹಿಸಿದರು.

