ಬೆಳಗಾವಿ: ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಹಾಗೂ ಪರಿಸರವಾದಿಗಳು ಕಡ್ಡಾಯವಾಗಿ ಗಮನಿಸಬೇಕಾದ ಗಂಭೀರ ಪ್ರಕರಣ ಬೆಳಗಾವಿ ತಾಲೂಕಿನ ಬಡಾಲ–ಅಂಕಲಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಇತಿಹಾಸ ಹೊಂದಿರುವ ಲಕ್ಷಾಂತರ ಗಿಡಮರಗಳನ್ನು ಜೆಸಿಬಿ ಬಳಸಿ ಅಮಾನುಷವಾಗಿ ಕಿತ್ತುಹಾಕಲಾಗಿದೆ. ಶ್ರೀಗಂಧದ ಮರಗಳು, ಕೌಳಿ, ಸಾಗವಾಣಿ, ಕಾರಿ, ಬೋರೆಹಣ್ಣು ಸೇರಿದಂತೆ ಔಷಧೀಯ ಗಿಡಮೂಲಿಕೆಗಳನ್ನೊಳಗೊಂಡ ಅನೇಕ ಮರಗಳು ನೆಲಸಮವಾಗಿವೆ.
ಕಂದಾಯ ಇಲಾಖೆಗೆ ಸೇರಿದ ಅರಣ್ಯ ಪ್ರದೇಶವನ್ನು ಇಂಧನ ಇಲಾಖೆಗೆ ಸೋಲಾರ್ ಪ್ಲಾಂಟ್ ಸ್ಥಾಪನೆಗಾಗಿ ಲೀಸ್ ನೀಡಲಾಗಿದೆ ಎನ್ನಲಾಗಿದ್ದು, ಸುಮಾರು 40 ಎಕರೆ ಪ್ರದೇಶದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣದ ನೆಪದಲ್ಲಿ ಅರಣ್ಯ ನಾಶ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಗಿಡಮರಗಳನ್ನು ಕತ್ತರಿಸಲಾಗಿದೆ ಎಂಬುದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮದಲ್ಲಿರುವ ಕೌರಿ ಗುಡ್ಡದ ಸುಮಾರು 50 ಎಕರೆ ಪ್ರದೇಶದಲ್ಲಿ ಲಕ್ಷಾಂತರ ಗಿಡಮರಗಳ ಮಾರಣಹೋಮ ನಡೆದಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸುಮಾರು 500 ಎಕರೆ ವ್ಯಾಪ್ತಿಯ ಕೌರಿ ಗುಡ್ಡ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಸಂಚಾರ ಹೆಚ್ಚಿದ್ದು, ರಾಷ್ಟ್ರೀಯ ಪ್ರಾಣಿ ನವಿಲುಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿವೆ. ಇಂತಹ ಪರಿಸರ ಸಂವೇದನಾಶೀಲ ಪ್ರದೇಶದಲ್ಲಿ ನಡೆದ ಈ ಕೃತ್ಯ ತೀವ್ರ ಆತಂಕ ಮೂಡಿಸಿದೆ.
ಈ ಪ್ರಕರಣದ ಕುರಿತು ಸಂಬಂಧಪಟ್ಟ ಇಲಾಖೆಗಳ ತಕ್ಷಣದ ತನಿಖೆ ಹಾಗೂ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿಬರುತ್ತಿದೆ.

