ಕಾರವಾರ: ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ವಿಚಾರವಾಗಿ ದೂರು ನೀಡಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಪ್ರಕರಣದಲ್ಲಿ ಬಂಧಿತರಾಗಿರುವ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ನಾಲ್ವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿ ಸುಚಿತ್ರಾ, ಎ2 ಲೋಕನಾಥ್, ಎ3 ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಎ4 ಆಕಾಶ್ ಅವರನ್ನು ಸಿದ್ದಾಪುರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಈ ಪ್ರಕರಣದ ಬೆನ್ನಲ್ಲೇ ಸಿದ್ದಾಪುರ ಗ್ರಾಮದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮಸ್ಥರು ಕಮಲಾಕರ್ ಭಟ್ ಅವರನ್ನು ತಮ್ಮ ವಶಕ್ಕೆ ನೀಡುವಂತೆ ಪಟ್ಟು ಹಿಡಿದು ಕೆಲಕಾಲ ಗ್ರಾಮಕ್ಕೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ. “ನಾವು ಬುದ್ಧಿಕಲಿಸುತ್ತೇವೆ” ಎಂದು ಗ್ರಾಮಸ್ಥರು ಒತ್ತಾಯಿಸಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಎರಡು ಮಕ್ಕಳ ತಾಯಿ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ್ ಭಟ್ ನಡುವಿನ ಅಕ್ರಮ ಸಂಬಂಧವೇ ಈ ಕೊಲೆ ಪ್ರಕರಣಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅನೈತಿಕ ಸಂಬಂಧದ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ವಸಂತ್ ಎಂಬುವವರು ದುರ್ದೈವಿಯಾಗಿ ಸಾವನ್ನಪ್ಪಿದ್ದಾರೆ. ಹತ್ಯೆ ನಡೆಸಿ ಪರಾರಿಯಾಗುತ್ತಿದ್ದ ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಏಳು ಜನರನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಲೆ ಬಳಿಕ ಸುಚಿತ್ರಾ ಹಾಗೂ ಕಮಲಾಕರ್ ಭಟ್ ಸಿದ್ದಾಪುರದಿಂದ ಪರಾರಿಯಾಗಲು ಯತ್ನಿಸಿದಾಗ, ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತ ವಸಂತ್ ಸಹೋದರ ಮಹೇಶ್ ನಾಯ್ಕ್ ಉದ್ಯೋಗದ ನಿಮಿತ್ತ ಬೆಂಗಳೂರಿನಲ್ಲಿ ವಾಸವಾಗಿದ್ದು, ಪತ್ನಿ ಸುಚಿತ್ರಾ ಹಾಗೂ ಇಬ್ಬರು ಪುತ್ರಿಯರು ಸಿದ್ದಾಪುರದಲ್ಲಿ ನೆಲೆಸಿದ್ದರು. ಇತ್ತೀಚೆಗೆ ಸುಚಿತ್ರಾಳಿಗೆ ಜ್ಯೋತಿಷಿ ಕಮಲಾಕರ್ ಭಟ್ ಪರಿಚಯವಾಗಿದ್ದು, ಜ್ಯೋತಿಷ್ಯ ಹೇಳುವ ನೆಪದಲ್ಲಿ ಅವನು ಮನೆಗೆ ಆಗಾಗ ಬರುತ್ತಿದ್ದ ಮತ್ತು ಅಲ್ಲಿಯೇ ತಂಗುತ್ತಿದ್ದ ಎನ್ನಲಾಗಿದೆ. ಇದು ಮಕ್ಕಳಿಗೆ ಅಸಮಾಧಾನ ಉಂಟುಮಾಡಿತ್ತು.
ತಾಯಿ ಮತ್ತು ಜ್ಯೋತಿಷಿಯ ನಡುವೆ ಅತಿಯಾದ ಸಲುಗೆ ಇರುವುದನ್ನು ಹಿರಿಯ ಮಗಳು ಪ್ರಶ್ನಿಸಿದ್ದರಿಂದ, ಸುಚಿತ್ರಾ ಆಕೆಗೆ ಹಿಂಸೆ ನೀಡುತ್ತಿದ್ದಳು ಎಂಬ ಆರೋಪವೂ ಇದೆ. ಇದರಿಂದ ಬೇಸತ್ತ ಮಗಳು ಬೆಂಗಳೂರಿನಲ್ಲಿ ಇದ್ದ ತಂದೆಗೆ ಮೆಸೇಜ್ ಕಳುಹಿಸಿ, ತಮಗೂ ಸಹೋದರಿಗೂ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಳು.
ಮಗಳ ಸಂದೇಶ ನೋಡಿ ತಕ್ಷಣ ಊರಿಗೆ ಬಂದ ಮಹೇಶ್ ನಾಯ್ಕ್, ಸಿದ್ದಾಪುರದಲ್ಲಿ ಮಕ್ಕಳನ್ನು ಭೇಟಿಯಾಗಿ ವಿಷಯ ತಿಳಿದುಕೊಂಡು ಠಾಣೆಗೆ ದೂರು ನೀಡಿದ್ದರು. ಈ ವಿಷಯ ತಿಳಿದ ಸುಚಿತ್ರಾ, ಕಮಲಾಕರ್ ಭಟ್, ಲೋಕನಾಥ್ ಸೇರಿದಂತೆ ಇತರರು ವಸಂತ್ ಮನೆಗೆ ತೆರಳಿ ಗಲಾಟೆ ನಡೆಸಿ ಮಹೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಮಧ್ಯಪ್ರವೇಶಿಸಲು ಮುಂದಾದ ವಸಂತ್ ಮೇಲೂ ಹಲ್ಲೆ ನಡೆಸಲಾಗಿದ್ದು, ಗಂಭೀರ ಗಾಯಗಳಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅನೈತಿಕ ಸಂಬಂಧ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಇದೀಗ ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ನಾಲ್ವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.

