ಬೆಳಗಾವಿ: ಅಸಲಿ ಪತ್ರಕರ್ತರ ಸೋಗಿನಲ್ಲಿ ಸರಕಾರಿ ಮಹಿಳಾ ಅಧಿಕಾರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಖದೀಮರ ಹೆಡೆಮುರಿ ಕಟ್ಟುವಲ್ಲಿ ಖಾಕಿ ಯಶಸ್ವಿಯಾಗಿದೆ. ಮಹಿಳಾ ಅಧಿಕಾರಿಯ ಮನೆಯ ಕೊಠಡಿಯಲ್ಲಿ ಹಿಡನ್ ಕ್ಯಾಮರಾ ಅಳವಡಿಸಿ ಖಾಸಗಿ ವಿಡಿಯೋಗಳನ್ನು ಪಡೆದು ಬೆದರಿಕೆ ಹಾಕುತ್ತಿದ್ದ ಮೂವರು ನಕಲಿ ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸಮೀರ್ ನಿಸಾರ್ ಅಹ್ಮದ್ ಶೇಖ್ (32), ಅಬ್ದುಲ್ ರಶೀದ್ ಮಕಾನದಾರ (51) ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಎಂದು ಗುರುತಿಸಲಾಗಿದೆ. ಆರೋಪಿಗಳು ಮಹಿಳಾ ಅಧಿಕಾರಿಯ ಖಾಸಗಿ ವಿಡಿಯೋಗಳನ್ನು ಮುಂದಿಟ್ಟುಕೊಂಡು ಬರೋಬ್ಬರಿ ಒಂದು ಕೋಟಿ ರೂ.ಗೆ ಬ್ಲ್ಯಾಕ್‌ಮೇಲ್ ಮಾಡಿದ್ದು, ತಕ್ಷಣ 50 ಲಕ್ಷ ರೂ. ನೀಡುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಮಹಿಳಾ ಅಧಿಕಾರಿ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ, ಸಿಪಿಐ ಬಿ.ಆರ್. ಗಡೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣ ದಾಖಲು ಮಾಡದಂತೆ ಆರೋಪಿಗಳು ಸಾಕಷ್ಟು ಒತ್ತಡ ಹಾಕಿದ್ದರೂ, ಪೊಲೀಸರು ಅದನ್ನು ಲೆಕ್ಕಿಸದೆ ಕಾನೂನು ಕ್ರಮ ಕೈಗೊಂಡಿದ್ದಾರೆ.
ಈ ಬ್ಲ್ಯಾಕ್‌ಮೇಲ್ ಜಾಲ ಇನ್ನಷ್ಟು ವಿಸ್ತಾರವಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿ ಆರೋಪಿಗಳ ವಿಚಾರಣೆ ಮುಂದುವರಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ತಿಳಿಸಿದ್ದಾರೆ.

