ಬೆಂಗಳೂರು, ಫೆ.05: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಹುಸಿ ಬಾಂಬ್ ಬೆದರಿಕೆ ಆತಂಕ ಮೂಡಿಸಿದೆ. ಹಲಸೂರು ಪ್ರದೇಶದಲ್ಲಿರುವ ಇಟಲಿ ರಾಯಭಾರಿ ಕಚೇರಿಗೆ ಇ-ಮೇಲ್ ಮೂಲಕ ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಜನವರಿ 30ರಂದು ಬಂದಿದ್ದ ಈ ಬೆದರಿಕೆ ಮೇಲ್ ಇದೀಗ ತಡವಾಗಿ ಬಹಿರಂಗಗೊಂಡಿದೆ. ಐದು ಆರ್‌ಡಿಎಕ್ಸ್ ಬಾಂಬ್‌ಗಳನ್ನು ಸ್ಫೋಟಿಸುವುದಾಗಿ ಇ-ಮೇಲ್‌ನಲ್ಲಿ ಬೆದರಿಕೆ ಒಡ್ಡಲಾಗಿದೆ.
ಇಟಾಲಿಯನ್ ಕಾನ್ಸುಲೇಟ್‌ನ ಸೆಕ್ಯೂರಿಟಿ ಮ್ಯಾನೇಜರ್ ಜಿಯೋಡೊಮೆನಿಕ್ ಓ ಮಿಲಾನೋ ಅವರು ಹಲಸೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ಜನವರಿ ಕೊನೆಯ ವಾರದಲ್ಲಿ ರಾಜಧಾನಿಯ ರಾಜ್ಯಪಾಲರ ಕಚೇರಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಅದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸಗಳಿಗೂ ಬಾಂಬ್ ಬೆದರಿಕೆ ಹಾಕಲಾಗಿತ್ತು. ಈ ಎಲ್ಲ ಪ್ರಕರಣಗಳ ಕುರಿತು ಪೊಲೀಸರು ಗಂಭೀರ ತನಿಖೆ ನಡೆಸುತ್ತಿದ್ದಾರೆ.

