ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಪಗಡೆಯಾಟ ಜೋರಾಗಿದ್ದು, ಆಡಳಿತ ಪಕ್ಷದೊಳಗಿನ ಬಣ ರಾಜಕೀಯ ಮತ್ತೊಮ್ಮೆ ತಾರಕಕ್ಕೇರಿದೆ. ಸಿಎಂ ಸಿದ್ದರಾಮಯ್ಯ ಪರವಾಗಿ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದರೆ, ಡಿಸಿಎಂ ಪರವಾಗಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಡಾ. ಯತೀಂದ್ರ ಅವರು “ಮುಂದಿನ ಐದು ವರ್ಷಗಳೂ ಸಿದ್ದರಾಮಯ್ಯನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ” ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ, ಇದಕ್ಕೆ ಶಾಸಕ ಇಕ್ಬಾಲ್ ಹುಸೇನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪದೇಪದೆ ತಂದೆ ಪರವಾಗಿ ಯತೀಂದ್ರ ಮಾತನಾಡುವುದು ಸರಿಯಲ್ಲ ಎಂದು ಟೀಕಿಸಿದ ಅವರು, ಇಂತಹ ಹೇಳಿಕೆಗಳಿಂದ ಪಕ್ಷದೊಳಗೆ ಅನಗತ್ಯ ಪ್ರವೋಕೆಶನ್ ಆಗುತ್ತದೆ ಎಂದಿದ್ದಾರೆ.
“ನಾನು ಡಿಸಿಎಂ ಪರವಾಗಿ ಮಾತನಾಡಿದ್ದಕ್ಕೆ ನನಗೆ ನೋಟಿಸ್ ನೀಡಲಾಗಿತ್ತು. ಆದರೆ ಈಗ ಸಿಎಂ ಪುತ್ರ ಯತೀಂದ್ರ ನೀಡಿದ ಹೇಳಿಕೆಗಳಿಗೆ ಯಾಕೆ ನೋಟಿಸ್ ಕೊಡಲಾಗಿಲ್ಲ?” ಎಂದು ಪ್ರಶ್ನಿಸಿರುವ ಹುಸೇನ್, ಪಕ್ಷದಲ್ಲಿ ಎಲ್ಲರಿಗೂ ಒಂದೇ ನಿಯಮ ಇರಬೇಕು ಎಂದು ಆಗ್ರಹಿಸಿದ್ದಾರೆ.
ಇದಲ್ಲದೆ, “ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಡಬೇಕು” ಎಂದು ಹೇಳಿದ ಹುಸೇನ್, ಪಕ್ಷದೊಳಗೆ ಶಿಸ್ತಿನಿಂದ ನಡೆದುಕೊಳ್ಳಬೇಕೆಂದು ಯತೀಂದ್ರಗೆ ಟಾಂಗ್ ನೀಡಿದ್ದಾರೆ.
ಒಂದೇ ಪಕ್ಷದೊಳಗಿನ ಈ ಬಹಿರಂಗ ಹೇಳಿಕೆಗಳು ಕಾಂಗ್ರೆಸ್ ಒಳಗಿನ ಬಣ ರಾಜಕೀಯ ಮತ್ತೆ ಸದ್ದು ಮಾಡುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಪಗಡೆಯಾಟ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

