ನೆಲಮಂಗಲ, ಫೆಬ್ರವರಿ 9:ಕೆನಡಾದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ ನೆಲಮಂಗಲ ತಾಲೂಕಿನ ಕನ್ನಡಿಗನೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ವರದಿಯಾಗಿದೆ. ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ದುರ್ಘಟನೆ ಕರ್ನಾಟಕದಲ್ಲಿರುವ ಕುಟುಂಬಸ್ಥರನ್ನು ಆಳವಾದ ಶೋಕದಲ್ಲಿ ಮುಳುಗಿಸಿದೆ.
ಮೃತರನ್ನು ಚಂದನ್ ಕುಮಾರ್ (37) ಎಂದು ಗುರುತಿಸಲಾಗಿದ್ದು, ಅವರು ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಗ್ರಾಮದ ಮೂಲದವರು. ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ವಾಸವಾಗಿದ್ದ ಚಂದನ್ ಕುಮಾರ್, ಎಲ್ ಅಂಡ್ ಟಿ (L&T) ಕಂಪನಿಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಗುಂಡಿನ ದಾಳಿ ನಡೆದದ್ದು ಹೇಗೆ?
ಸ್ಥಳೀಯರ ಮಾಹಿತಿಯ ಪ್ರಕಾರ, ಫೆಬ್ರವರಿ 8ರಂದು ಕೆನಡಾದ ವುಡ್‌ಬೈನ್ ಮಾಲ್ ಸಮೀಪ ಚಂದನ್ ಕುಮಾರ್ ತಮ್ಮ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಏಕಾಏಕಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಘಟನೆ ಕುರಿತು ಸ್ಥಳೀಯರು ಹೇಳುವಂತೆ, ಮಾಲ್ ಹೊರಭಾಗದಲ್ಲಿ ಕಾರಿನೊಳಗೆ ಕುಳಿತಿದ್ದ ವ್ಯಕ್ತಿಯ ಮೇಲೆ ಹಲವು ಬಾರಿ ಗುಂಡಿನ ಶಬ್ದ ಕೇಳಿಬಂದಿದ್ದು, ಕಾರಿನ ಗಾಜಿನ ಮೂಲಕ ನೋಡಿದಾಗ ಗನ್ ಹಿಡಿದ ವ್ಯಕ್ತಿಯೊಬ್ಬ ನಿಂತಿರುವುದು ಕಂಡಿತು ಎಂದು ತಿಳಿಸಿದ್ದಾರೆ.
ಕುಟುಂಬದ ಹಿನ್ನೆಲೆ
ಚಂದನ್ ಕುಮಾರ್ ಅವರ ತಂದೆ ನಂದಕುಮಾರ್ ನಿವೃತ್ತ ಶಿಕ್ಷಕರಾಗಿದ್ದು, ತಾಯಿ ಹಾಗೂ ಕುಟುಂಬದವರು ತ್ಯಾಮಗೊಂಡ್ಲು ಗ್ರಾಮದಲ್ಲೇ ವಾಸಿಸುತ್ತಿದ್ದಾರೆ. ಘಟನೆ ಬಗ್ಗೆ ಕೆನಡಾ ಪೊಲೀಸರು ಕುಟುಂಬಕ್ಕೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಕುಟುಂಬಸ್ಥರ ಪ್ರಕಾರ, ಚಂದನ್ ಕುಮಾರ್ ಅವರು ಕೆಲಸದ ಜೊತೆಗೆ ವಿದೇಶದಲ್ಲಿರುವ ಕನ್ನಡಿಗರಿಗೆ ನೆರವು ನೀಡುವ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವು–ಬೆಳವಣಿಗೆಯ ಉದ್ದೇಶದಿಂದ ವಿವಿಧ ಸಂಘಟನೆಗಳ ಮೂಲಕ ಸೇವೆ ಸಲ್ಲಿಸುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಕೆ. ಸುಧಾಕರ್ ಸಂತಾಪ :
ಈ ಕುರಿತು ಮಾಜಿ ಸಚಿವ ಕೆ. ಸುಧಾಕರ್ ಅವರು ಟ್ವೀಟ್ ಮಾಡಿದ್ದು, “ಕೆನಡಾದ ಟೊರಾಂಟೋ ನಗರದಲ್ಲಿ ಐಟಿ ಉದ್ಯೋಗಿಯಾಗಿ ನೆಲೆಸಿದ್ದ ನಮ್ಮ ಕರ್ನಾಟಕ ಮೂಲದ, ನೆಲಮಂಗಲ ತಾಲ್ಲೂಕು ತ್ಯಾಮಗೊಂಡ್ಲು ಗ್ರಾಮದ ನಿವಾಸಿ ಚಂದನ್ ಕುಮಾರ್ ಅವರು ಶನಿವಾರ ನಡೆದ ಶೂಟೌಟ್‌ನಲ್ಲಿ ಹತ್ಯೆಗೀಡಾಗಿರುವುದು ಅತ್ಯಂತ ಆಘಾತಕಾರಿ ಮತ್ತು ದುಃಖಕರ ಸಂಗತಿ” ಎಂದು ಹೇಳಿದ್ದಾರೆ.
“ಮೃತ ಚಂದನ್ ಕುಮಾರ್ ಅವರ ತಂದೆ–ತಾಯಿ ಹಾಗೂ ಕುಟುಂಬ ಸದಸ್ಯರಿಗೆ ನನ್ನ ಹೃದಯಪೂರ್ವಕ ಸಂತಾಪಗಳು. ಕೇಂದ್ರ ವಿದೇಶಾಂಗ ಸಚಿವಾಲಯದ ಸಹಕಾರದೊಂದಿಗೆ ಮೃತದೇಹವನ್ನು ಆದಷ್ಟು ಶೀಘ್ರ ಭಾರತಕ್ಕೆ ತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅವರ ಕುಟುಂಬದ ದುಃಖದಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಭಾಗಿಯಾಗಿದ್ದಾನೆ” ಎಂದು ಬರೆದುಕೊಂಡಿದ್ದಾರೆ.

