ಲಕ್ನೋ: ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧನಗೊಂಡಿದ್ದ ಆರೋಪಿಯೊಬ್ಬ ಫರಿದಾಬಾದ್ ಜೈಲಿನಲ್ಲೇ ಸಹ ಕೈದಿಯ ಹಲ್ಲೆಯಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಕೊಲೆಯಾದ ಆರೋಪಿಯನ್ನು ಅಬ್ದುಲ್ ರೆಹಮಾನ್ (20) ಎಂದು ಗುರುತಿಸಲಾಗಿದ್ದು, ಜೈಲಿನಲ್ಲಿದ್ದ ಅರುಣ್ ಚೌಧರಿ ಎಂಬ ಕೈದಿ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿ ಹತ್ಯೆ ಎಸಗಿದ್ದಾನೆ ಎನ್ನಲಾಗಿದೆ.
ಭಾನುವಾರ ಅಬ್ದುಲ್ ರೆಹಮಾನ್ ಮತ್ತು ಅರುಣ್ ಚೌಧರಿ ನಡುವೆ ಜಗಳ ನಡೆದಿದೆ. ಈ ಜಗಳ ತೀವ್ರ ಸ್ವರೂಪ ಪಡೆದು, ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಅರುಣ್ ಚೌಧರಿ ರೆಹಮಾನ್ ತಲೆಗೆ ಹರಿತವಾದ ವಸ್ತುವಿನಿಂದ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರೆಹಮಾನ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.
ಅಬ್ದುಲ್ ರೆಹಮಾನ್ ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯ ಮಿಲ್ಕಿಪುರ ನಿವಾಸಿಯಾಗಿದ್ದು, 2025ರ ಮಾರ್ಚ್ 2ರಂದು ಫರಿದಾಬಾದ್‌ನ ಪಾಲಿ ಗ್ರಾಮದ ಬಳಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಮತ್ತು ಹರಿಯಾಣ ವಿಶೇಷ ಕಾರ್ಯಪಡೆ (STF) ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿತ್ತು.
ಬಂಧನದ ವೇಳೆ ಆತನ ಬಳಿ ಪತ್ತೆಯಾದ ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ಬಾಂಬ್ ನಿಷ್ಕ್ರಿಯ ದಳಗಳು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಿದ್ದವು. ನಕಲಿ ಗುರುತಿನ ಚೀಟಿಯನ್ನು ಹೊಂದಿದ್ದ ರೆಹಮಾನ್, ಆಟೋರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದನೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಆತನಿಂದ ವಶಪಡಿಸಿಕೊಂಡ ಡಿಜಿಟಲ್ ಸಾಧನಗಳಲ್ಲಿ ರಾಮ ಮಂದಿರಕ್ಕೆ ಸಂಬಂಧಿಸಿದ ವೀಡಿಯೊಗಳು, ದಾಖಲೆಗಳು ಹಾಗೂ ಉದ್ದೇಶಿತ ದಾಳಿಯ ಸೂಚನೆಗಳು ಮತ್ತು ವಿವರಗಳು ಪತ್ತೆಯಾಗಿದ್ದವು. ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ISKP) ಸಂಬಂಧಿತ ಜಾಲಗಳ ಮೂಲಕ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಸಂಪರ್ಕ ಹೊಂದಿರುವ ಹ್ಯಾಂಡ್ಲರ್‌ಗಳಿಂದ ಗ್ರೆನೇಡ್‌ಗಳನ್ನು ಪಡೆದುಕೊಂಡಿದ್ದಾನೆ ಎಂದು ಅಧಿಕಾರಿಗಳು ಈ ಹಿಂದೆ ಮಾಹಿತಿ ನೀಡಿದ್ದರು.
ರಾಮ ಮಂದಿರದ ಮೇಲಿನ ದಾಳಿಗೆ ನಿರ್ದಿಷ್ಟ ದಿನಾಂಕ ನಿಗದಿಯಾಗಿರದಿದ್ದರೂ, ಶೀಘ್ರದಲ್ಲೇ ದಾಳಿ ನಡೆಸಲು ಸಿದ್ಧತೆ ನಡೆಯುತ್ತಿತ್ತು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿತ್ತು.

