ಬೆಂಗಳೂರು, ಫೆಬ್ರವರಿ 17, 2026: ರಾಜ್ಯ ರಾಜಕಾರಣದಲ್ಲಿ ವಿದೇಶ ಪ್ರವಾಸ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ನ ಕೆಲ ಶಾಸಕರ ವಿದೇಶ ಪ್ರವಾಸದ ಕುರಿತು ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ತೀವ್ರ ಲೇವಡಿ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಎಂಎಲ್‌ಸಿ ಹೆಚ್. ವಿಶ್ವನಾಥ್, ರಾಜ್ಯದ ರಾಜಕೀಯ ಅಧೋಗತಿಗೆ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದರು. “ಸಿಎಂ ಸಿದ್ದರಾಮಯ್ಯ ಆಡಳಿತ ನೋಡಿ ಜನ ನಗುತ್ತಿದ್ದಾರೆ. ಶಾಸಕರು ಯಾಕೆ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಾರೆ ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ. ವಿದೇಶ ಪ್ರವಾಸದ ಉದ್ದೇಶ ತಿಳಿದುಕೊಳ್ಳದಷ್ಟು ಜನರು ದಡ್ಡರಲ್ಲ,” ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಶೇ. 90 ರಷ್ಟು ಸಾಕ್ಷರತೆ ಕೊರತೆ ಇದೆ ಎಂದು ಹೇಳುವ ಮೂಲಕ ಸರ್ಕಾರದ ಕಾರ್ಯವೈಖರಿಯನ್ನು ಅವರು ಪ್ರಶ್ನಿಸಿದರು. “ನೀವು ಏನು ಮಾಡುತ್ತಿದ್ದೀರಾ ಎಂಬುದು ಜನರಿಗೆ ಸ್ಪಷ್ಟವಾಗಿ ಗೊತ್ತಿದೆ,” ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿದೇಶ ಪ್ರವಾಸದ ಹಿನ್ನೆಲೆ ಹಾಗೂ ಅದರ ಅಗತ್ಯತೆಯ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಅವರು ಆಗ್ರಹಿಸಿದರು.

