ಮಂಡ್ಯ, ಫೆಬ್ರವರಿ 19: ಆಸಿಡ್ ದಾಳಿ ಮಾಡಿ ಚಿನ್ನಾಭರಣ ದರೋಡೆ ನಡೆದಿದೆ ಎಂದು ದೂರು ನೀಡಿದ ಪ್ರಕರಣದಲ್ಲಿ ತಿರುವು ಎದುರಾಗಿದೆ. ಆಸಿಡ್ ದಾಳಿಗೆ ಒಳಗಾದೆನೆಂದು ಹೇಳಿಕೊಂಡಿದ್ದ ಚಿನ್ನದಂಗಡಿ ಮಾಲೀಕನೇ ಇದೀಗ ಜೈಲು ಸೇರಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ “ಮಹಾಲಕ್ಷ್ಮಿ ಜ್ಯುವೆಲರಿ” ಎಂಬ ಅಂಗಡಿ ನಡೆಸುತ್ತಿದ್ದ ಜಿತೇಂದ್ರ ಸಿಂಗ್ ಎಂಬ ವ್ಯಾಪಾರಿ, ತನ್ನ ಮೇಲೆ ದುಷ್ಕರ್ಮಿಗಳು ಆಸಿಡ್ ಎರಚಿ 170 ಗ್ರಾಂ ಚಿನ್ನ ಮತ್ತು 8 ಕೆಜಿ ಬೆಳ್ಳಿ ದೋಚಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ. ಜೊತೆಗೆ ಅಂಗಡಿಯ ಸಿಸಿಟಿವಿ ಡಿವಿಆರ್ ಸಹ ಕಳುವಾಗಿದೆ ಎಂದು ಹೇಳಿದ್ದ.
ಆದರೆ ಘಟನೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಜಿತೇಂದ್ರನ ಮುಖದ ಮೇಲಿದ್ದ ಸುಟ್ಟ ಕಲೆಗಳನ್ನು ಗಮನಿಸಿ ಅನುಮಾನಗೊಂಡರು. ಕಣ್ಣಿಗೆ ಯಾವುದೇ ಹಾನಿಯಾಗದಂತೆ, ಮುಖದ ಮೇಲಷ್ಟೇ ರಾಸಾಯನಿಕ ಹರಡಿರುವುದು ಪೊಲೀಸರ ಗಮನ ಸೆಳೆದಿತ್ತು. ವಿಚಾರಣೆ ಕಠಿಣಗೊಳಿಸಿದಾಗ ಪ್ರಕರಣದ ಸತ್ಯಾಂಶ ಬಯಲಾಗಿದ್ದು, ಇದು ಸಂಪೂರ್ಣವಾಗಿ ರೂಪಿಸಿದ ನಾಟಕ ಎಂಬುದು ತಿಳಿದುಬಂದಿದೆ.
ಚಿನ್ನದ ಬೆಲೆ ಗಗನಕ್ಕೇರಿರುವ ಹಿನ್ನೆಲೆ, ಚಿನ್ನ ಖರೀದಿಗೆ ಪಡೆದಿದ್ದ ಸಾಲ ಮತ್ತು ಗ್ರಾಹಕರಿಂದ ಅಡವಿಟ್ಟಿದ್ದ ಚಿನ್ನದ ಒತ್ತಡದಿಂದ ತಪ್ಪಿಸಿಕೊಳ್ಳಲು ಜಿತೇಂದ್ರ ಈ ಖತರ್ನಾಕ್ ಪ್ಲಾನ್ ರೂಪಿಸಿದ್ದಾನೆ ಎನ್ನಲಾಗಿದೆ. ಚಿನ್ನಾಭರಣ ತಯಾರಿಕೆಗೆ ಬಳಸುವ, ತೀವ್ರ ಹಾನಿ ಮಾಡದ ರಾಸಾಯನಿಕವನ್ನು ಮುಖಕ್ಕೆ ಬಳಿದುಕೊಂಡು ಆಸಿಡ್ ದಾಳಿ ನಾಟಕವಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಲಗಾರರು ಹಾಗೂ ಚಿನ್ನ ಅಡವಿಟ್ಟ ಗ್ರಾಹಕರಿಗೆ ಅಂಗಡಿ ಕಳುವಾಗಿದೆ ಎಂಬ ನೆಪ ಹೇಳಿ, ಕೆಲವು ದಿನಗಳ ಬಳಿಕ ಅಂಗಡಿ ಮುಚ್ಚಿ ರಾಜಸ್ಥಾನಕ್ಕೆ ಮರಳಲು ಯತ್ನಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಆದರೆ ಜಿತೇಂದ್ರನ ಯೋಜನೆ ಮಂಡ್ಯ ಪೊಲೀಸರ ತೀವ್ರ ತನಿಖೆಗೆ ಸಿಲುಕಿದ್ದು, ಸತ್ಯಾಸತ್ಯತೆ ಬಹಿರಂಗವಾಗಿದೆ. ಜಿತೇಂದ್ರ ವಿರುದ್ಧವೇ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಈ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

