ಮುದಗಲ್ಲ (ರಾಯಚೂರು ಜಿಲ್ಲೆ), ಫೆ.19: ಮುದಗಲ್ಲ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಇಂದು ಪಟ್ಟಣ ಬಂದ್ ಮಾಡಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದವು.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ಲ ಪಟ್ಟಣವು ಸುತ್ತಮುತ್ತಲಿನ 60 ಗ್ರಾಮಗಳು ಹಾಗೂ 18 ತಾಂಡಾಗಳಿಗೆ ಕೇಂದ್ರ ಬಿಂದುವಾಗಿದ್ದು, ಎರಡು ಪ್ರಮುಖ ರಾಜ್ಯ ಹೆದ್ದಾರಿಗಳನ್ನು ಹೊಂದಿದೆ. ತಾಲೂಕು ಕೇಂದ್ರವಾಗಲು ಅಗತ್ಯವಾದ ಪುರಸಭೆ, ಕೃಷಿ ಉತ್ಪನ್ನ ಮಾರುಕಟ್ಟೆ, ವಿದ್ಯುತ್ ಪ್ರಸರಣಾ ಕೇಂದ್ರ, ಪದವಿ ಕಾಲೇಜು, ಬಸ್ ನಿಲ್ದಾಣ, ಟ್ರೆಜರಿ ಕಚೇರಿ, ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ನಾಡ ತಹಸೀಲ್ದಾರ್ ಕಚೇರಿ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಂತಹ ಮೂಲ ಸೌಲಭ್ಯಗಳು ಇಲ್ಲಿವೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
ಮಾಜಿ ಶಾಸಕ ದಿ.ಎಂ. ಗಂಗಣ್ಣನವರ ನೇತೃತ್ವದಲ್ಲಿ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದರು. “ದಶಕಗಳಿಂದ ತಾಲೂಕು ಘೋಷಣೆಗೆ ಆಗ್ರಹಿಸುತ್ತಿದ್ದೇವೆ. ಆದರೆ ಈ ಬಾರಿ ಸರ್ಕಾರದಿಂದ ನಿರಾಸೆ ಎದುರಾಗಿದೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬೆಳಗ್ಗೆಯಿಂದಲೇ ಪಟ್ಟಣದ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ನಿವಾಸಿಗಳು ಸೇರಿ ಮುದಗಲ್ಲದ ರಾಯಚೂರು–ಬೆಳಗಾವಿ ಮುಖ್ಯ ರಾಜ್ಯ ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯ ಅವರು ಹೋರಾಟಕ್ಕೆ ಮಣಿದು ಮುದಗಲ್ಲವನ್ನು ತಾಲೂಕು ಕೇಂದ್ರವೆಂದು ಘೋಷಿಸಬೇಕು; ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾನಪ್ಪ ವಜ್ಜಲ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ದಲಿತ ಸಂಘರ್ಷ ಸಮಿತಿ, ವ್ಯಾಪಾರಸ್ಥರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಪ್ರಗತಿಪರ ಸಂಘಟನೆಗಳು ಹೋರಾಟದಲ್ಲಿ ಭಾಗವಹಿಸಿದವು. ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

