ರಾಯ್ಪುರ, ಫೆಬ್ರವರಿ 20: ಪೆಟ್ರೋಲ್ ಬಂಕ್‌ನಲ್ಲಿ ಧೂಮಪಾನ ಮಾಡಬಾರದೆಂದು ಸೂಚಿಸಿದ್ದಕ್ಕೆ ಆಕ್ರೋಶಗೊಂಡ ಯುವಕನೋರ್ವ ಬೈಕ್‌ಗೆ ಪೆಟ್ರೋಲ್ ತುಂಬಿಸುವ ವೇಳೆ ಇಂಧನ ಪೈಪ್‌ಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ Raipur ನಗರದಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಧರ್ಮೇಂದ್ರ ಕ್ಷತ್ರಿ ಮತ್ತು ಇಮ್ರಾನ್ ಎಂದು ಗುರುತಿಸಲಾಗಿದೆ. ಘಟನೆ ನಗರದ ಉರ್ಲಾ ಪ್ರದೇಶದಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಸಂಭವಿಸಿದೆ. ಬೆಂಕಿ ಹಚ್ಚಿದ ಪರಿಣಾಮ ಬೈಕ್ ಹಾಗೂ ಪೆಟ್ರೋಲ್ ಪಂಪ್ ಭಾಗಕ್ಕೆ ಬೆಂಕಿ ತಗುಲಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪೊಲೀಸರ ಮಾಹಿತಿಯಂತೆ, ಇಬ್ಬರು ಆರೋಪಿಗಳು ಬೈಕ್‌ಗೆ ಇಂಧನ ತುಂಬಿಸಲು ಬಂಕ್‌ಗೆ ಆಗಮಿಸಿದ್ದರು. ಇಮ್ರಾನ್ ಬೈಕ್ ಮೇಲೆ ಕುಳಿತಿದ್ದರೆ, ಧರ್ಮೇಂದ್ರ ಪಕ್ಕದಲ್ಲಿ ನಿಂತಿದ್ದನು. ಇಂಧನ ಟ್ಯಾಂಕ್ ತೆರೆಯುತ್ತಿದ್ದ ವೇಳೆ ಧರ್ಮೇಂದ್ರ ಸಿಗರೇಟು ಸೇದಲು ಯತ್ನಿಸಿದ್ದಾನೆ.
ಈ ವೇಳೆ ಪೆಟ್ರೋಲ್ ಬಂಕ್ ಸಿಬ್ಬಂದಿ ಧೂಮಪಾನ ಮಾಡಬಾರದೆಂದು ಎಚ್ಚರಿಸಿದ್ದಾರೆ. ಇದರಿಂದ ಕೋಪಗೊಂಡ ಧರ್ಮೇಂದ್ರ, ಇಂಧನ ತುಂಬಿಸುತ್ತಿದ್ದ ಪೈಪ್‌ಗೆ ಬೆಂಕಿ ಹಚ್ಚಿದ್ದಾನೆ. ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡು ಬೈಕ್ ಹಾಗೂ ಪಂಪ್ ಭಾಗಕ್ಕೆ ವ್ಯಾಪಿಸಿದೆ.
ಸಮಯೋಚಿತವಾಗಿ ಎಚ್ಚೆತ್ತ ಪೆಟ್ರೋಲ್ ಬಂಕ್ ಸಿಬ್ಬಂದಿ ಅಗ್ನಿಶಾಮಕ ಸಾಧನಗಳನ್ನು ಬಳಸಿ ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಪೆಟ್ರೋಲ್ ಪಂಪ್ ಮ್ಯಾನೇಜರ್ ನೀಡಿದ ದೂರು ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಉರ್ಲಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

