ನವದೆಹಲಿ, ಫೆಬ್ರವರಿ 23: ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಯು, ಅಲ್ಲಿರುವ ಭಾರತೀಯ ಪ್ರಜೆಗಳು ಈ ಕೂಡಲೇ ದೇಶವನ್ನು ತೊರೆಯುವಂತೆ ತುರ್ತು ಸೂಚನೆ ನೀಡಿದೆ. ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಯಾವುದೇ ಸುರಕ್ಷಿತ ಸಾರಿಗೆ ವ್ಯವಸ್ಥೆಗಳ ಮೂಲಕ ಇರಾನ್ ತೊರೆಯುವಂತೆ ಒತ್ತಾಯಿಸಲಾಗಿದೆ.
ಈ ವರ್ಷ ಜನವರಿ 14 ರಂದು ಹೊರಡಿಸಲಾಗಿದ್ದ ಸಲಹೆಯನ್ನು ರಾಯಭಾರ ಕಚೇರಿ ಮತ್ತೊಮ್ಮೆ ಪುನರುಚ್ಚರಿಸಿದ್ದು, ಇರಾನ್‌ನಲ್ಲಿರುವ ಎಲ್ಲಾ ಭಾರತೀಯ ನಾಗರಿಕರು ಹಾಗೂ ಭಾರತೀಯ ಮೂಲದವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದೆ. ವಿಶೇಷವಾಗಿ ಪ್ರತಿಭಟನೆಗಳು ಅಥವಾ ಸಾರ್ವಜನಿಕ ಸಮಾವೇಶಗಳು ನಡೆಯುವ ಪ್ರದೇಶಗಳನ್ನು ತಪ್ಪಿಸಲು ಸೂಚಿಸಲಾಗಿದೆ.
ಸ್ಥಳೀಯ ಮಾಧ್ಯಮಗಳ ವರದಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಮತ್ತು ಇತ್ತೀಚಿನ ಬೆಳವಣಿಗೆಗಳ ಕುರಿತು ಅಪ್ಡೇಟ್ ಆಗಿರಬೇಕು ಎಂದು ರಾಯಭಾರ ಕಚೇರಿ ಹೇಳಿದೆ. ಜೊತೆಗೆ, ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ಮನವಿ ಮಾಡಿದೆ.
ಭಾರತೀಯ ಪ್ರಜೆಗಳು ತಮ್ಮ ಪಾಸ್‌ಪೋರ್ಟ್‌ಗಳು, ಗುರುತಿನ ಚೀಟಿಗಳು ಸೇರಿದಂತೆ ಪ್ರಯಾಣ ಮತ್ತು ವಲಸೆ ಸಂಬಂಧಿತ ಅಗತ್ಯ ದಾಖಲೆಗಳನ್ನು ಸದಾ ತಮ್ಮ ಬಳಿಯೇ ಇಟ್ಟುಕೊಳ್ಳಬೇಕೆಂದು ಸೂಚಿಸಲಾಗಿದೆ.
ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಲು ರಾಯಭಾರ ಕಚೇರಿಯು ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಿದೆ: +98 912 810 9115, +98 912 810 9109, +98 912 810 9102 ಮತ್ತು +98 993 217 9359. cons.tehran@mea.gov.in
ಇಮೇಲ್ ಮೂಲಕವೂ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ.

