ಜೆರುಸಲೇಂ, ಫೆಬ್ರವರಿ 25: ನರೇಂದ್ರ ಮೋದಿ (PM Modi) ಇಂದಿನಿಂದ ಎರಡು ದಿನಗಳ ಕಾಲ ಇಸ್ರೇಲ್ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿಯವರ ಆಗಮನಕ್ಕೂ ಮುನ್ನ ಇಸ್ರೇಲ್ ಸಂಸತ್ತಾದ Knessetನಲ್ಲಿ ಭಾರತೀಯ ತ್ರಿವರ್ಣ ಧ್ವಜದ ಬಣ್ಣದ ದೀಪಾಲಂಕಾರ ಕಂಗೊಳಿಸಿದ್ದು, ವಿಶೇಷ ಸ್ವಾಗತದ ವಾತಾವರಣ ನಿರ್ಮಾಣವಾಗಿದೆ.
ಪ್ರಧಾನಿ ಮೋದಿ ಫೆಬ್ರವರಿ 26ರಂದು ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅವರ ಭೇಟಿಗೆ ಇಸ್ರೇಲ್ ಮಾಧ್ಯಮಗಳಲ್ಲಿ ವಿಶೇಷ ಮಹತ್ವ ಸಿಕ್ಕಿದ್ದು, The Jerusalem Post ತನ್ನ ಮುಖಪುಟದಲ್ಲಿ ಹಿಂದಿ ಹಾಗೂ ಹೀಬ್ರೂ ಭಾಷೆಯಲ್ಲಿ “ನಮಸ್ತೆ” ಎಂದು ಪ್ರಕಟಿಸಿ, “ಎರಡು ಪ್ರಾಚೀನ ರಾಷ್ಟ್ರಗಳು ಹೊಸ ಅಧ್ಯಾಯ ಆರಂಭಿಸಲಿವೆ” ಎಂದು ಬರೆದುಕೊಂಡಿದೆ.
ಈ ಮೊದಲು 2015ರಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದರು. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಗರಿಗೆದರಿರುವ ಈ ಸಂದರ್ಭದಲ್ಲಿನ ಮೋದಿ ಅವರ ಭೇಟಿ ಮಹತ್ವ ಪಡೆದುಕೊಂಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆಹ್ವಾನದ ಮೇರೆಗೆ ಈ ಪ್ರವಾಸ ನಡೆಯುತ್ತಿದೆ.
ಇಸ್ರೇಲ್ ಸಂಸತ್ತಿನ ಸ್ಪೀಕರ್ ಅಮೀರ್ ಒಹಾನಾ ನೆಸ್ಸೆಟ್ ಭವನದ ದೀಪಾಲಂಕಾರದ ಚಿತ್ರ ಹಂಚಿಕೊಂಡು, “ಪ್ರಧಾನಿ ಮೋದಿಗೆ ಗೌರವ ಸೂಚಕವಾಗಿ ನೆಸ್ಸೆಟ್ ಅನ್ನು ಭಾರತೀಯ ಧ್ವಜದ ಬಣ್ಣಗಳಲ್ಲಿ ಬೆಳಗಿಸಲಾಗಿದೆ” ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ನೆತನ್ಯಾಹು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರನ್ನು ಸಹ ಭೇಟಿ ಮಾಡಲಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ನಾವೀನ್ಯತೆ, ರಕ್ಷಣಾ ಮತ್ತು ಭದ್ರತಾ ಸಹಕಾರ, ಕೃಷಿ, ನೀರು ನಿರ್ವಹಣೆ, ವ್ಯಾಪಾರ ಮತ್ತು ಆರ್ಥಿಕತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆಯ ಕುರಿತು ಚರ್ಚೆಗಳು ನಡೆಯಲಿವೆ.
ಭಾರತ ಮತ್ತು ಇಸ್ರೇಲ್ ದೀರ್ಘಕಾಲದ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರಗಳಾಗಿದ್ದು, ಸಂಕಷ್ಟಕಾಲಗಳಲ್ಲಿ ಪರಸ್ಪರ ಬೆಂಬಲದ ಮೂಲಕ ಸಂಬಂಧವನ್ನು ಬಲಪಡಿಸಿವೆ ಎಂದು ಮೂಲಗಳು ತಿಳಿಸಿವೆ. ಈ ಭೇಟಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರೀಕ್ಷೆಯಿದೆ.
‘ನೆಸ್ಸೆಟ್’ ಎಂದರೆ ಇಸ್ರೇಲ್‌ನ ಏಕಸಭೆಯ ಶಾಸಕಾಂಗ. ಇದರ ಹೆಸರು ಪ್ರಾಚೀನ ಹೀಬ್ರೂ ಪದದಿಂದ ಬಂದಿದ್ದು, ‘ಮಹಾಸಭೆ’ ಎಂಬ ಅರ್ಥ ಹೊಂದಿದೆ. 120 ಸದಸ್ಯರಿರುವ ಈ ಸಂಸತ್ತು ದೇಶದ ಎಲ್ಲಾ ಕಾನೂನುಗಳನ್ನು ಅಂಗೀಕರಿಸುವ ಜೊತೆಗೆ ಸರ್ಕಾರದ ಕಾರ್ಯಾಚರಣೆಗಳ ಮೇಲ್ವಿಚಾರಣೆಯನ್ನೂ ನಡೆಸುತ್ತದೆ.
ಮೆಡಿಟರೇನಿಯನ್ ಸಮುದ್ರ ಮತ್ತು ಡೆಡ್ ಸೀ ನಡುವಿನ ಜೂಡಿಯನ್ ಪರ್ವತ ಪ್ರದೇಶದಲ್ಲಿರುವ ಜೆರುಸಲೇಂ ನಗರದ ಗಿವತ್ ರಾಮ್ ಪ್ರದೇಶದಲ್ಲಿ ನೆಸ್ಸೆಟ್ ಭವನ ಇದೆ. 2017ರ ಐತಿಹಾಸಿಕ ಪ್ರವಾಸದ ಬಳಿಕ ಪ್ರಧಾನಿ ಮೋದಿ ಇಸ್ರೇಲ್‌ಗೆ ನೀಡುತ್ತಿರುವ ಇದು ಎರಡನೇ ಭೇಟಿ ಆಗಿದ್ದು, ಅವರ ಮೂರನೇ ಅವಧಿಯ ಮೊದಲ ಇಸ್ರೇಲ್ ಪ್ರವಾಸವಾಗಿದೆ.

