ಹಾಸನ, ಫೆಬ್ರವರಿ 26: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರೆಂಟಿ ಯೋಜನೆಗಳು ಜನರ ಮೇಲೆಯೇ ಸಾಲ ಹೊರಿಸಿ ಜಾರಿಗೆ ತರಲಾಗುತ್ತಿವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ಚುನಾವಣೆ ಗೆಲ್ಲುವ ಉದ್ದೇಶದಿಂದ ಜನರ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡಲಾಗುತ್ತಿದ್ದು, ಶಾಶ್ವತ ಅಭಿವೃದ್ಧಿ ರಾಜ್ಯದಲ್ಲಿ ಕಾಣುತ್ತಿಲ್ಲ ಎಂದು ಅವರು ಟೀಕಿಸಿದರು.
ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಡಕಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇಂತಹ ತಾತ್ಕಾಲಿಕ ಯೋಜನೆಗಳು ಹೆಚ್ಚು ದಿನ ಉಳಿಯುವುದಿಲ್ಲ. ದೇಶದ ಭವಿಷ್ಯವನ್ನು ಗಮನದಲ್ಲಿಟ್ಟು ಎಚ್ಚರಿಕೆಯಿಂದ ತೀರ್ಮಾನ ಕೈಗೊಳ್ಳಬೇಕು” ಎಂದು ಜನತೆಗೆ ಕರೆ ನೀಡಿದರು.
ಭಾರತ ಆರ್ಥಿಕವಾಗಿ ವಿಶ್ವದಲ್ಲಿ ಮೂರನೇ ಸ್ಥಾನಕ್ಕೇರಲು ದೌಡಾಯಿಸುತ್ತಿದೆ. ಆದರೆ ರಾಜ್ಯದಲ್ಲಿ ಉದ್ಯೋಗ ಸಮಸ್ಯೆ ಗಂಭೀರವಾಗಿದೆ ಎಂದು ಅವರು ಹೇಳಿದರು. ಧಾರವಾಡದಲ್ಲಿ ನಡೆದ ಪ್ರತಿಭಟನೆಗಳನ್ನು ಉಲ್ಲೇಖಿಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
ಸರ್ಕಾರ 76 ಸಾವಿರ ಶಿಕ್ಷಕರ ನೇಮಕಾತಿಯನ್ನು ವಿಳಂಬಗೊಳಿಸಿದ್ದು, ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದೆ ಎಂದು ಆರೋಪಿಸಿದರು. ಕಳೆದ ಮೂರು ವರ್ಷಗಳಿಂದ ಯಾವುದೇ ಪ್ರಮುಖ ಉದ್ಯೋಗಾವಕಾಶಗಳು ಸೃಷ್ಟಿಯಾಗಿಲ್ಲ. “ಯುವಕರು ನಮ್ಮ ಮನೆ ಬಾಗಿಲಿಗೆ ಬಂದಾಗ ಮನಸ್ಸಿಗೆ ನೋವಾಗುತ್ತದೆ. ನೀವು ಸರ್ಕಾರದ ಖಜಾನೆ ತುಂಬಿಸುತ್ತಿದ್ದೀರಿ. ಆದರೆ ಹಣದ ದುರುಪಯೋಗ, ವರ್ಗಾವಣೆ ದಂಧೆ ಹಾಗೂ ಅಕ್ರಮಗಳು ನಡೆಯುತ್ತಿವೆ” ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ತಾವು ಎರಡು ಇಲಾಖೆಗಳ ಸಚಿವರಾಗಿದ್ದು, ಭಾರತ ವಿಶ್ವ ಮಟ್ಟದಲ್ಲಿ ಮುನ್ನಡೆಯುತ್ತಿದೆ ಎಂದು ಹೇಳಿದರು. ಆಟೋಮೊಬೈಲ್ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಎಲೆಕ್ಟ್ರಿಕ್ ಬೈಕ್‌ಗಳ ಉತ್ಪಾದನೆ ಹೆಚ್ಚಿಸಲಾಗಿದೆ. ತಯಾರಾಗುತ್ತಿರುವ ಎಲೆಕ್ಟ್ರಿಕ್ ವಾಹನಗಳ ಸುಮಾರು 30 ಶೇಕಡಾ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಭಾಷಣದ ವೇಳೆ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಅವರು, “ನಾವು ಸಣ್ಣ ಮಕ್ಕಳಿದ್ದಾಗ ನಮ್ಮ ಅಜ್ಜಿ ಬೆಳಿಗ್ಗೆ ಮತ್ತು ಸಂಜೆ ದೇವಸ್ಥಾನಕ್ಕೆ ಹೋಗಿ ಸ್ವಚ್ಛಗೊಳಿಸಿ ದೀಪ ಹಚ್ಚುತ್ತಿದ್ದರು. ಆ ಸಂಸ್ಕೃತಿ ಹಳ್ಳಿಗಳಲ್ಲಿ ಕಡಿಮೆಯಾಗುತ್ತಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
ಅಂದಿನ ಕಾಲದಲ್ಲಿ ಹಳ್ಳಿಗಳಿಗೆ ವಿದ್ಯುತ್, ರಸ್ತೆ, ಕುಡಿಯುವ ನೀರು ಇಲ್ಲದಿದ್ದರೂ ಜನರಲ್ಲಿ ಮೌಲ್ಯಗಳು ಹೆಚ್ಚಾಗಿದ್ದವು ಎಂದು ಹೇಳಿದರು. ಇದೇ ವೇಳೆ ತಮ್ಮ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದಾಗಿ ಹೇಳಿದ ಅವರು, “ನನಗೆ ಐದು ಬಾರಿ ಭಗವಂತ ಜೀವ ನೀಡಿದ್ದಾನೆ” ಎಂದು ಭಾವನಾತ್ಮಕವಾಗಿ ನುಡಿದರು.

